Index   ವಚನ - 3    Search  
 
ಶಿವಯೋಗಿ ಶಿವಯೋಗಿಯೆಂದ್ಹೆಸರಿಟ್ಟುಕೊಂಡು ನುಡಿವ ಅಣ್ಣಗಳಿರಾ! ನಿಮ್ಮ ಧ್ಯಾನಮೂಲವೆಂಬ ಮನೆಯ ಪೂರ್ವಸ್ಥಾನ ಬಾಗಿಲೊಳಗೆ ಬರುವ ಭಾನುವಿನ ಬಟ್ಟೆಯ ಬೆಳಕಿನಲ್ಲಿ ನಿಂದು, ಶ್ರೀರಾಮ ರಾಮನೆಂಬುವ ಸ್ಮರಣೆಯನು ಮಾಡಬಲ್ಲರೆ ಆತನಿಗೆ ತನ್ನ ಕಾಯಪುರವೆಂಬ ಪಟ್ಟಣದೊಳಗೆ ಮೇಲುದುರ್ಗದೊಳಗಿರ್ದು ಅರಸಿನ ದಾಳಿಯನು ಮಾಡಿ ಕೊಳುಕೊಂಡು ಹೋದನೆಂದು ಬರುವ ಕಾಲನ ಪರಿವಾರವ ಕಂಡು, ಮೇಲುದುರ್ಗದೊಳಗಿರ್ದ ಅರಸಿನ ವಲಯಂ ಬಿಟ್ಟು, ಪಟ್ಟಣವ ಹಾಳಕೆಡವಿ ಗೋಳಿಟ್ಟ ಅರಸನಂತೆ, ಬಯಲಿಗೆ ಬಯಲು ಆಕಾರದಲ್ಲಿ ನಿಂದು, ಬರುತ್ತಲಾ ಪರಿವಾರವನ್ನು ಕಂಡು, ಕಾದಿ ಜಗಳವನು ಕೊಟ್ಟು ಹಿಂದಕ್ಕೆ ನೂಕಿ, ಪರಾಲಯದೊಳಗಿರ್ದ ಅರಸನನ್ನು ಮೇಲುದುರ್ಗಕ್ಕೆ ತಂದು ಇಂಬಿಟ್ಟು ಹಾಳ ಪಟ್ಟಣವನ್ನು ತುಂಬಿಸಿ ಮೇಳೈಸಿ ಮನೆಯ ಬಂಧು ದಾಯಾದರೆಲ್ಲರು ಆತಂಗೆ ಕಾಲವಂಚನೆಗೆ ಗೆಲಿದಂಥ ಶಿವಯೋಗೀಶ್ವರನೆಂದೆನ್ನಬಹುದು ಕಾಣಿರೋ. ಇಂತು ಕಾಯದ ಕೀಲನೆ ಅರಿಯದೆ, ಕಾಲವಂಚನೆಗೆ ಒಳಗಾಗಿ, ನಾನು ಶಿವಯೋಗಿ ಶಿವಯೋಗಿಯೆಂದು ಹೆಸರಿಟ್ಟುಕೊಂಡು ಒಬ್ಬರಿಗೊಬ್ಬರು ಗುರೂಪದೇಶವ ಕೊಟ್ಟು, ಉರಿಯ ಸೋಂಕಿದ ಕರ್ಪುರದ ಧೂಪದಂತೆ ಇರಬೇಕೆಂದು, ಹೆಂಡಿರ ಬಿಟ್ಟು ಮಕ್ಕಳ ಬಿಟ್ಟು ಮಂಡೆಯನು ಬೋಳಿಸಿಕೊಂಡು ಮನದ ನಿಲುಗಡೆಯನರಿಯದ ಗೂಬೆಗಳು ಕಾವಿಯ ಅರಿವೆಯನು ಹೊದ್ದುಕೊಂಡು, ದೇವರೊಳಗೆ ದೇವರೆಂದು ಪೂಜೆಗೊಂಡು, ಮಠ ಮನೆಯಲ್ಲಿ ಬಸಲ ಪರ್ಯಾದಿಯಲ್ಲಿ ನಿಂದು, ಬೋನದಾಸೆಗೆ ಜ್ಞಾನಬೋಧೆಯನು ಹೇಳುವ ಗುರುವಿನ ಬ್ರಹ್ಮಕಲ್ಪನೆಯ ಮನ ತುಂಬಿ ಬಿರಿಕಿಕ್ಕಿ ಹೋಗುವಾಗ, ಕಾಲನವರು ತಮ್ಮ ಪತ್ರವನು ನೋಡಿಕೊಂಡು ಬಂದು ಹೋಗಲಿತ್ತ ಕಲಿತ ವಿದ್ಯೆ ಕೈಕಾಲನು ಹಿಡಿದು ಎಳಕೊಂಡು ಹೋಗುವಾಗ ಗಟ್ಟಿನೆಲಕ್ಕೆ ಬಿದ್ದು ಕೆಟ್ಟೆ ಕೆಟ್ಟೆ ಸತ್ತೆ ಸತ್ತೆ ಎಂದು ಹಲ್ಲು ಗಂಟಲ್ಹರಕೊಂಡು ಹೋಗುವಂಥ ಶಿವಯೋಗಿಗಳೆಂಬ ಕುಟಿಲರ ಕಂಡು ನಗುತ್ತಿರ್ದಾತ ಸಿದ್ಧಮಲ್ಲನದಾತ ಮೇಗಣಗವಿಯ ಗುರುಸಿದ್ಧೇಶ್ವರಪ್ರಭುವೆ.