ಎದೆಯಲಿಂಗವನು ಬಿಟ್ಟು ಗುಡಿಯಲಿಂಗಕ್ಕೆ
ಶರಣೆನ್ನಲಾಗದು ಎಂದು ಹೇಳುವ
ಕುದಿಗಿಳಿಗಳು ನೀವು ಕೇಳಿರೋ.
ನಿಮ್ಮ ಅಂತರಂಗದೊಳಗಿರ್ಪ ಲಿಂಗವನು ಬಿಟ್ಟು
ಅನ್ಯದೈವಕ್ಕೆ ಶರಣೆಂದರು, ಅದು ಎಂತೆಂದರೆ,
ಬೀದಿಯೊಳು ಹಿಟ್ಟು ಮಾಡುವ ಕಲ್ಲುಲಿಂಗವ ತಂದು
ಅದಕ್ಕೆ ಪಾದ್ಯ ತೀರ್ಥ ಪ್ರಸಾದವನರ್ಪಿಸಿ,
ಶಿವಲಿಂಗದೇವರೆಂದು ಶಿಖೆಯಲ್ಲಿ ಕಟ್ಟಿಕೊಂಡು
ನಾವು ಶಿವಭಕ್ತರು ಅನ್ಯದೈವಕ್ಕೆ ಶರಣೆನ್ನಲಾಗದು ಎಂದು
ಹೇಳುವ ಬರಿಯ ಮಾತಿನ ತರ್ಕಿಗಳ ಕಂಡು ನಗುತಿರ್ದಾತ
ಸಿದ್ಧಮಲ್ಲನದಾತ ಮೇಗಣಗವಿಯ ಗುರುಶಿವಸಿದ್ಧೇಶ್ವರಪ್ರಭುವೆ.