ಕವಿ ಕವಿಗಳೆಂದು ಹೆಸರಿಟ್ಟುಕೊಂಡು ನುಡಿವ ಅಣ್ಣಗಳಿರಾ!
ಕಾಯದ ಕೀಲನರಿತು ಕವಿತ್ವವನು ಮಾಡುವಂಥ ಭೇದವನು
ಬಲ್ಲರೆ ಹೇಳಿ, ಅರಿಯದಿರ್ದರೆ ಕೇಳಿ.
ನಿಮ್ಮ ಅಂಗಕಾಯವೆಂಬ ಅಕ್ಷರಕ್ಕೆ `ವಾ' ಎಂಬ ಒತ್ತು ಕೊಟ್ಟು
ಇಳಿಯ ತೆಗೆದು ಜನ್ಮದಲ್ಲಿ ನುಡಿಸಬಲ್ಲರೆ
ಆತನೀಗ ಪಂಚತತ್ವದ ಮೂಲವ ತಿಳಿದು
ಮನವೆಂಬ ಗದ್ದಿಗೆಯ ಅಜ್ಞಾನವೆಂಬ
ನಾದಸ್ವರವನು ಹಿಡಿದುಕೊಂಡು
ಅದರ ಅನುವರಿತು ಊದಿ, ಪಿಂದೆ ದಾಡೆಯಿಂದ
ಪೃಥ್ವಿಯ ಎತ್ತಿದ ಸರ್ಪನ ಎಬ್ಬಿಸಿ ಬ್ರಹ್ಮಾಂಡಕ್ಕೆ ಮುಖ ಮಾಡಿ
ನಿಲ್ಲಿಸಬಲ್ಲರೆ ಆತನಿಗಾಗಿ ಗೀತ ಗಾಯನ ವಾದ್ಯ
ಪ್ರಾಸ ದೀರ್ಘ ಗುರು ಲಘುಗಳೆಂಬ ಭೇದವ ಬಲ್ಲೆನೆಂದೆನ್ನಬಹುದು.
ನಿಮ್ಮ ಅಂಗ ಕಾಯವೆಂಬ ಅಕ್ಷರಕ್ಕೆ `ವಾ' ಎಂಬ ಒತ್ತುಕೊಟ್ಟು ಕಾಣಿರೋ !
ಗುಡಿಸ ಕೊಟ್ಟು, ಗುಡಿಸಿನ ಒಳಗೆ
ಸುಳಿದು ಜಿಹ್ವೆಯಲ್ಲಿ ನುಡಿಸಬಲ್ಲರೆ
ಅಂತಹವನಿಗೆ ತನ್ನ ತನುವೆಂಬ ಹುತ್ತದ
ಒಂಬತ್ತು ಹೆಜ್ಜವನು ಮುಚ್ಚಿದ ದ್ವಾರಂಗಳನ್ನೆಲ್ಲ ಬಳಿದು
ಅಂಬರಮಂಟಪದೊಳಗೆ ಸುಳಿದಾಡುವಂಥ ಶಂಭುಲಿಂಗವನು
ನೋಡಿಕೊಂಡು ಸಂತೈಸಿ, ವರುಷ ವರುಷಕ್ಕೆ
ಒಂದು ಸಂಭ್ರಮದ ಜಾತ್ರೆಯ ನೆರೆಯಬಲ್ಲರೆ
ಆತನಿಗೆ ಮಹಾಪ್ರೌಢನೆಂದೆನ್ನಬಹುದು ಕಾಣಿರೋ.
ನಿಮ್ಮ ಕಾಯವೆಂಬ ಅಕ್ಷರಕ್ಕೆ `ವಾ' ಎಂಬ ಒತ್ತುಕೊಟ್ಟು,
ಕೊಂಬಿನಿಂದಿಳಿಯ ತೆಗೆದು ಆತನಿಗೆ ಆರು ಮೂರುಗಳೆಂಬ
ನವರಸವಿದ್ಯ ನಾದವನೆಬ್ಬಿಸುವಂಥ ತಾಳಗತಿಯ
ಪದಕಾರಣವ ಬಲ್ಲನೆಂದೆನ್ನಬಹುದು ಕಾಣಿರೋ.
ನಿಮ್ಮ ಅಂಗಕಾಯವೆಂಬ ಅಕ್ಷರಕ್ಕೆ `ವಾ' ಎಂಬ ಒತ್ತುಕೊಟ್ಟು
ಮೇಲೆತ್ವವಂ ಕೊಟ್ಟು, ಕೆಳಗೈತ್ವವಂ ಕೊಟ್ಟು,
ಇವೆರಡನು ಕೂಡಿ ಒಂದಮಾಡಿ ನುಡಿಸಬಲ್ಲರೆ
ಆತನಿಗೆ ಸ್ವರ್ಗ ಮರ್ತ್ಯ ಪಾತಾಳ ಇಂತೇಳು ಭುವನ,
ಹದಿನಾಲ್ಕು ಲೋಕ, ಸಪ್ತೇಳುಸಾಗರ,
ಅಷ್ಟಲಕ್ಷ ಗಿರಿಪರ್ವತಗಳನ್ನೆಲ್ಲ
ತನ್ನ ಅಂತರಂಗವೆಂಬ ಕುಕ್ಷಿಯೊಳಗೆ ಇಂಬಿಟ್ಟುಕೊಂಡು
ಪರರಿಗೆ ಕಾಣಬಾರದಂತಹ ಕುರೂಪಿಯಾಗಿ ಇರಬಲ್ಲರೆ
ಆತನಿಗೆ ಮಹಾಶಿವಜ್ಞಾನಿಯೆಂದೆನ್ನಬಹುದು ಕಾಣಿರೋ.
ನಿಮ್ಮ ಅಂಗಕಾಯವೆಂಬ ಅಕ್ಷರಕ್ಕೆ `ವಾ' ಎಂಬ ಒತ್ತುಕೊಟ್ಟು,
ಉತ್ವ ಔತ್ವ ಕೊಟ್ಟು, ಉತ್ವ ಔತ್ವವೆರಡನು ಕೂಡಿ
ಒಂದುಮಾಡಿ ನಿಲಿಸಿ ಜಮ್ಮೆದಲ್ಲಿ ನುಡಿಸಬಲ್ಲರೆ
ಆತನಿಗೆ ಆ ನರಕವಿ ವರಕವಿಗಳ ಕಣ್ಣಿಗೆ ಕಾಣಬಾರದಂತಹ
ಮುಸುಕಿನ ಮುಡಿಯಂ ಮಂದಿರ ಮನೆಯೊಳಗೆ
ಮುಹೂರ್ತವ ಮಾಡಿಕೊಂಡಿಹುದು.
ಓಂಕಾರವೆಂಬುವದೊಂದು ಅಕ್ಷರವ ನೋಡಿ
ಅನಂತ ಪರಿಪರಿಯ ವಚನಗಳ ಮಾಡಬಲ್ಲರೆ
ಆತನಿಗೆ ಮಹಾ ಉತ್ತಮ ಶಿವಕವೀಶ್ವರನೆಂದೆನ್ನಬಹುದು ಕಾಣಿರೋ.
ನಿಮ್ಮ ಅಂಗಕಾಯವೆಂಬ ಅಕ್ಷರಕ್ಕೆ `ವಾ' ಎಂಬ ಒತ್ತುಕೊಟ್ಟು
ಒಂದು ಸೊನ್ನೆಯ ಕೊಟ್ಟರೆ `ವಂ' ಎಂದು ಅಂತರಂಗದಲ್ಲಿ ತಿಳಿದು,
ಜಿಹ್ವೆಯಲ್ಲಿ ನುಡಿಯಬಲ್ಲರೆ ಆತನಿಗೆ
ಕಾಯಪುರವೆಂಬ ಪಟ್ಟಣದೊಳಗೆ
ಹರಿದಾಡುವಂಥ ಆರುಮಂದಿ ತಳವಾರರ ತಲೆಯ ಕುಟ್ಟಿ,
ಮೂರುಮಂದಿ ಗರ ಬೆರೆದ ನೆಂಟರ ಮೂಗ ಕೊಯ್ದು,
ಸಾವಿರೆಸಳಿನ ಕಮಲದೊಳಗೆ ಪೊಕ್ಕು,
ತನ್ನ ಸಾವು ಮರಣ ತಪ್ಪಿಸಿಕೊಳ್ಳಬಲ್ಲರೆ ಆತನಿಗೆ
ಮಹಾಶಿವಯೋಗೀಶ್ವರನೆಂದೆನ್ನಬಹುದು ಕಾಣಿರೋ.
ನಿಮ್ಮ ಅಂಗಕಾಯವೆಂಬ ಅಕ್ಷರಕ್ಕೆ `ವಾ' ಎಂಬ ಒತ್ತುಕೊಟ್ಟು
ಎರಡು ಸೊನ್ನೆಯ ಕೊಟ್ಟರೆ `ವಃ' ಎಂದು ಅಂತರಂಗದಲ್ಲಿ ತಿಳಿದು
ಜಿಹ್ವೆಯಲ್ಲಿ ನುಡಿಯಬಲ್ಲರೆ, ಆತನಿಗೆ ತನ್ನ ಅಂತರಂಗವೆಂಬ
ಹರಿವಾಣದೊಳಗೆ ತುಂಬಿಟ್ಟಿದ್ದಂತಹ ಷಡುರಸ ಪಂಚಾಮೃತ
ಪಂಚಕಜ್ಜಾಯಗಳೆಲ್ಲ ಸವಿದುಂಡು ಚಪ್ಪರಿಸಿ ಹಿಪ್ಪೆಯ ಮಾಡಿ
ಬೀದಿಯೊಳಗೆ ಬಿಸುಟಬಲ್ಲರೆ ಆತನಿಗೆ ಕಾಯದ ಕೀಲನರಿತು
ಕವಿತ್ವವನು ಮಾಡುವಂತಹ ಪ್ರೌಢನೆಂದೆನ್ನಬಹುದು ಕಾಣಿರೋ.
ಇಂತೀ ಕಾಯದ ಕೀಲನರಿಯದ ಕವಿಗಳು
ಛಂದಸ್ಸು, ನಿಘಂಟು, ಅಮರ, ವ್ಯಾಕರಣ,
ನಾನಾರ್ಥಗಳೆಂಬ ಹೆಂಚ ಹೊಡೆದು ನೆತ್ತಿಯ ಮೇಲೆ ಹೊತ್ತುಕೊಂಡು
ತಿರುಗುವ ಕವಿಗಳೆಂಬ ಚಾತುರ್ಯದ ಮಾತ ನಿಟ್ಟಿಸಲು
ಆಡ ಸವಿವ ಜಾತಿಗಳ ಕಂಡು ನಗುತಿರ್ದಾತ
ಸಿದ್ಧಮಲ್ಲನದಾತ ಮೇಗಣಗವಿಯ
ಗುರು ಶಿವಸಿದ್ಧೇಶ್ವರಪ್ರಭುವೆ.