ಎರಡು ಹೆಸರಿನ ಮರದ
ಬೊಡ್ಡೆಯಲಾಡುವಾಲಿಯ ಮನೆ
ಏಳು ಬಗೆಯ ನಿರ್ಮಿತ,
ಹತ್ತು ಬಗೆಯ ಹರವರಿ,
ಒಂಬತ್ತು ಬಗೆಯ ಹಾದಿ.
ಆ ಮನೆಯ ಪಂಚಾಳರು ರಚಿಸಿದರು ನೋಡಾ!
ಮನೆಯೊಳಗೆ ಮಧುರದ ಪಾಕವಾಗುತಿರೆ,
ಆ ಮಧುರದ ಸವಿಗೆಟ್ಟು, ಹೊತ್ತಿ,
ಹೊಗೆ ಮನೆಯ ಸುತ್ತಿದುದ ಕಂಡು,
ಕೆಟ್ಟಡಿಗೆಯನಟ್ಟು, ಶುದ್ಧ ಮಾಡುವೆನೆಂದು,
ಹಿಂದಣ ಮನೆಯ ಸುಟ್ಟು, ಮುಂದೊಂದು ಮನೆಯ ಕಟ್ಟಿ,
ಅಂದಚೆಂದವ ನೋಡಿ,
ಆಡಿಸುತ್ತಿದ್ದ ಭೇದವ ನೀನೆ ಬಲ್ಲೆ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.