Index   ವಚನ - 62    Search  
 
ಹೆಣ್ಣು ಗಂಡು ಕೂಡಿ ರಚಿಸಿದ ಬಣ್ಣದ ಕೊತ್ತಳದೊಳು ಮನೆಮಾಡಿಕೊಂಡಿರ್ಪ ದುರ್ಗಿಯ ಕಂಡೆನಿಂದು. ಆಕೆಯ ಮುಖ ಮೂರು, ಕಣ್ಣಾರು, ಬಾಯಿ ಮೂರು, ನಾಸಿಕ ಮೂರು, ನಾಲಗೆ ಮೂರು, ಮೊಲೆ ಏಳು, ಅಂಗವೆರಡು, ಶೃಂಗಾರ ನಾಲ್ಕು, ಬಯಕೆ ಎಂಟು, ಬಾಳ್ವೆ ಎರಡು, ದುಃಖವೈದು. ದುರಿತ ನೂರಿಪ್ಪತ್ತರ ದುಮ್ಮಾನದಲ್ಲಿ ಮಾಯದ ರಕ್ಷಿಯ ಮುಂದಿಟ್ಟುಕೊಂಡು, ಛಾಯದ ಕೊಳಗದಲಳೆವುತ್ತಲಳೆವುತ್ತ ಮುಡಿ ಮಾಸಿತೆಂದು ಮಾನುನಿ ಮರುಗಿ, ರಾಸಿಗೆ ಕಾಲ ಮಾಡಿ, ಮಾನಕೆ ತಲೆಯನಿಟ್ಟು, ರೋಷದಿಂದ ಶೋಕಂಗೈವುತ್ತಿಪ್ಪ ಅಂಗನೆ, ಮುಖ ಮೂರ ತಿರುವೆ, ಮೂರುಲೋಕವದರಿದ್ದ ಕಂಡೆ. ಕಣ್ಣಾರಲ್ಲಿ ಉರಿವುತ್ತಿಪ್ಪ ಅಗ್ನಿ ಲೋಕವ ಸುತ್ತುವುದ ಕಂಡೆನು. ಬಾಯಿ ಮೂರು ತೆರೆಯೆ ಎಣೆಯಿಲ್ಲದ ತಾರೆಯ ಕಂಡೆನು. ಏಳು ಮೊಲೆಯೊಳಗಣ ವಿಷ ಹೊರಹಬ್ಬಿ ಹರಿವುದ ಕಂಡೆನು. ಅಂಗವೆರಡು ಅಲೆದಾಡುವುದ ಕಂಡೆನು. ಶೃಂಗಾರವು ನಾಲ್ಕು ದಿಕ್ಕಿಗೆ ಬೆಳಗುವುದ ಕಂಡೆನು. ಬಯಕೆ ಎಂಟು ಬ್ರಹ್ಮಾಂಡವ ಕೊಂಡು ಮುಣುಗುವುದ ಕಂಡೆನು. ದುಃಖವೈದು ಮೊರೆಯಿಡುವುದ ಕಂಡೆನು. ದುರಿತ ನೂರಿಪ್ಪತ್ತು ಧೂಳಿಗೊಟ್ಟಿಯ ಕೊಂಬುದ ಕಂಡೆ, ಕೋಟೆಯ ಅರಸು ಬೆನ್ನೂರಿಲಿ ನಿಂದು ತಾಪಸಬಡುತಿರ್ದ, ಮಾಯದುರಿತಕಂಜಿ. ಇದೇನು ಚೋದ್ಯ ಹೇಳಾ! ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.