Index   ವಚನ - 74    Search  
 
ಮರ್ಕಟ ಮದ್ಯಪಾನವ ಸವಿದು ಕುಡಿದು ಹೇರಾರಣ್ಯದೊಳು ಹೋಗುತಿರೆ, ವಿಜಿಯ ಪತ್ರಿಯ ಸವಿದು, ದತ್ತೂರಕಾಯ ಸವಿದು ತಿಂದು ನೆತ್ತಿಗೇರಿ, ಅಡಿಯಿಡುತಿರೆ, ಮೇಣ್ ವೃಶ್ಚಿಕ ಕಚ್ಚಿ ಬೇನೆಯಲ್ಲಿ ನರಳುತಿರೆ, ಹಿರಿದಪ್ಪ ಭೂತ ಸೋಂಕಿ ಅಂಗಲಾಚುವ ಸಮಯಕ್ಕೆ, ಪಗಲೊಡೆಯ ಮುಣುಗೆ, ಅಂಧಕಾರ ಕತ್ತಲೆಯೊಳಗೆ ಸಿಲ್ಕಿ, ಕಪಿ, ವಿಕಾರ ಹಿಡಿದು ಕಲ್ಲನೆಲನಂ ಹಾಯ್ದು ಸಾವಂತೆ ಎನ್ನ ಬಾಳುವೆ. ಅದು ಎಂತೆಂದೊಡೆ: ಭವಾರಣ್ಯದೊಳು ಬರುತಿರೆ ತನುವಿಕಾರವೆಂಬ ಸುರೆಯ ಗಡಿಗೆ ಮನವಿಕಾರವೆಂಬ ಭಂಗಿಯ ಸೊಪ್ಪು ಮೆದ್ದು, ಹೊನ್ನು ಹೆಣ್ಣು ಮಣ್ಣು ಮೂರೆಂಬ ತೊರೆ ತಲೆಗೇರಿ, ಮನವೆಂಬ ಚೇಳೂರಿ, ಕರಣಗುಣವೆಂಬ ಭೂತಸೋಂಕಿ, ಅಜ್ಞಾನಕೆ ಗುರಿಮಾಡಿ, ಸುಜ್ಞಾನವೆಂಬ ಸೂರ್ಯನನಡಗಿಸಿ, ಮಾಯಾತಮಂಧವೆಂಬ ಕತ್ತಲೆಯೊಳಗೆನ್ನನಿಕ್ಕಿ, ಮುಕ್ತಿಯಹಾದಿಯ ಕಾಣಲೀಸದೆ ಎನ್ನ ಕಾಡುತಿರ್ದೆಯಲ್ಲಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.