Index   ವಚನ - 94    Search  
 
ಹೊಲೆಯೊಳು ಹುಟ್ಟಿ, ಹೊಲೆಯೊಳು ಬೆಳೆದು, ಕುಲಮದಕೆ ಹೋರಾಡುತಿಪ್ಪರಯ್ಯಾ. ಅದು ಎಂತೆಂದರೆ: ಹುಟ್ಟುವುದು ಹೊಲೆ, ಹೊಂದುವುದು ಹೊಲೆ. ಬಾಹ್ಯದ ಹೊಲೆಯ ಹೇಳೇನೆಂದರಳವಲ್ಲ. ಕರುಳ ಜಾಳಿಗೆ, ಅಮೇಧ್ಯದ ಹುತ್ತು, ರಕ್ತದ ಮಡು, ಮಾಂಸದ ಕೊಗ್ಗೆಸರು, ಕೀವಿನ ಹೊಲಸು, ಕ್ರಿಮಿಕೀಟಕ ಜಂತಿನ ರಾಸಿ, ಎಲುವಿನ ಹಂಜರು, ಚರ್ಮದ ಮೇಲುಹೊದಿಕೆ. ಇಂತೀ ಹೊಲೆಯೊಳು ಜನಿತವಾದ ಕರ್ಮಕಾಯವೆಂದರಿಯದೆ ಕುಲಮದಕ್ಕೆ ಹೋರಾಡುವರು. ಕುಲವ ಕೇಳೇನೆಂದರೆ, ಇಂದ್ರ ಶೂದ್ರ, ಬ್ರಹ್ಮ ವೈಶ್ಯ, ವಿಷ್ಣು ಕ್ಷತ್ರಿಯ, ಈಶ್ವರ ಬ್ರಾಹ್ಮಣ. ಸಾಕ್ಷಿ: ``ಪಿತಾಮಹಸ್ತು ವೈಶ್ಯಸ್ಯ ಕ್ಷತ್ರಿಯಸ್ಯ ಪರೋ ಹರಿಃ| ಬ್ರಾಹ್ಮಣೋ ಭಗವಾನ್ ರುದ್ರಃ ಇಂದ್ರಃ ಶೂದ್ರಕುಲಸ್ಯ ಚ|| '' ಎಂದುದಾಗಿ, ಇನ್ನುಳಿದ ಮುನಿಕುಲ ಕೇಳ್ವರೆ- ಹೊಲೆಮಾದಿಗರ ಅಗಸರ ಬಸುರಲ್ಲಿ ಬಂದು ಶಿವನ ಪೂಜೆಯ ಮಾಡಿ, ಶಿವಕುಲವಾದುದನರಿಯದೆ ಕುಲಕ್ಕೆ ಹೋರಾಡುತಿಪ್ಪರಯ್ಯಾ. ಸಾಕ್ಷಿ: ``ಚಾಂಡಾಲವಾಟಿಕಾಯಾಂ ವಾ ಶಿವಭಕ್ತಃ ಸ್ಥಿತೋ ಯದಿ| ತತ್‍ಶ್ರೇಣೀ ಶಿವಲೋಕಸ್ಯ ತದ್ಗೃಹಂ ಶಿವಮಂದಿರಂ|| ಯಸ್ಯ ಚಿತ್ತಂ ಶಿವೇ ಲೀನಂ ತಸ್ಯ ಜಾತಿಃ ಕರೋತಿ ಕಿಂ| ಶಿವಲಿಂಗಶೀಲಬುದ್ಧಿಂ ಕುರ್ವಣಮೇವ ಪಾತಕಂ||'' ಎಂದುದಾಗಿ, ಇದುಕಾರಣ, ಶಿವಕುಲವಾದವರೊಳು ಕುಲವನರಸುವರುಂಟೆ? ಅರಸಲಿಲ್ಲ. ಅರಸಿದರೆ ಪಾತಕ. ಅದಕ್ಕೆ ಸಾಕ್ಷಿ: ``ಶಿವಕುಲಂ ಶಿವಭಕ್ತಸ್ಯ ಅನ್ಯಾಶ್ರಯೇಷು ನಿಂದಕಃ| ಶ್ವಾನಯೋನಿಶತಂ ಗತ್ವಾ ರೌರವಂ ನರಕಂ ವ್ರಜೇತ್||'' ಎಂದುದಾಗಿ, ಪರಮಾತ್ಮಾ, ನಿನ್ನ ಕುಲವಾದವರಿಗೆ ಕುಲವನೆತ್ತಿನುಡಿವ ಪಾತಕರನೆನಗೊಮ್ಮೆ ತೋರದಿರು ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.