ಅನ್ಯವಿಷಯ ಪಂಚೇಂದ್ರಿಯವೆಂದೆಂಬ
ಕುನ್ನಿಗಳ ಬಲೆಯೊಳಗಿರಿಸಬೇಡವೊ ಗುರುವೆ.
ಹರಗುರು ನಿಂದೆಕಾರರ ಕಾವ್ಯಕಥೆಗಳ
ಒರೆದು ಕೇಳುವರೆನ್ನವೆರಡು ಕಿವಿಯು ತಾ
ಹಿಡಿದಾಕಾರಕೆ ಬಾಯದೆರದು ರಂಜಿಸುತಲಿಹೆ
ಪರಮಾತ್ಮನ ಶ್ರುತಿ ಮಂತ್ರಾಗಮಂಗಳ
ವಿರಚಿಸಲೊಲ್ಲದೆ ಕುರಿಯ ದನಿಗೆ ಹುಲಿ
ಶರೀರವನಳಿದಂತೆ ಕರ್ಣೇಂದ್ರಿಯ ದೇವ. | 1 |
ಅನ್ಯಗೋಷ್ಠಿಯ ಪರನಿಂದ್ಯಗಳ ನುಡಿವರೆ
ಎನ್ನಾ ನಾಲಗೆ ಹರಿವುದುರುಗನಂತೆ
`ಓನ್ನಮಃಶಿವಾಯ'ಯೆಂಬ ಮಂತ್ರವ ನೆನೆಯದಲ್ಲಿ
ತನ್ನ ತಾ ಹಿಂದಕ್ಕೆ ಸೇದುತಲಿದೆ ಕರ್ಮಿ
ಗಿನ್ನೆಂತೊ ಹೇಳಾ ಗುರುವೆ ಮಾಂಸದ ಸವಿಗೆ ಮೀನು
ತನ್ನ ದೇಹವನಳಿದಂತೆ ಜಿಹ್ವೇಂದ್ರಿಯವು. | 2 |
ಪರಧನ ಪರಸ್ತ್ರೀಯರಾಟ ನೋಟಗಳನು
ನೆರೆ ನೋಡುವರೆನ್ನ ನಯನ ತಿಗುರಿಯಂತೆ
ತಿರುಗುತಲಿಗೆ ಸದಾ ಅನ್ಯಾಯವನಾಶ್ರಯಿಸಿ
ಹರಗುರುಲಿಂಗ ಪೂಜೆಗೆ ಅನಿಮಿಷದೃಷ್ಟಿ
ಇರಿಸಿ ನೋಡದೆ ತಾ ಪತಂಗ ಹಾರಿಯೆ ಬಂದು
ಉರಿಯೊಳು ಮಡಿದಂತೆ ನಯನೇಂದ್ರಿಯ ದೇವಾ. | 3 |
ಜೂಜು ಪಗಡಿ ಲೆತ್ತನಾಡಿ ಪರನಾರಿಯರ
ವಾಜಿಯಿಂದಲಿ ಹಿಡಿದೆಳೆವರೆ ದ್ವಿಹಸ್ತ
ರಾಜಿಸುತಿದೆ ರಮ್ಯವಾಗಿ, ಹರಗುರುಲಿಂಗದ
ಪೂಜೆಯ ಮಾಡೇನೆಂದರೆ ಕೈ ಏಳದೆ ಕರ್ಮ
ಭಾಜನದೊಳು ಸಿಲ್ಕಿ ಸ್ಪರ್ಶೇಂದ್ರಿಯದಿ ಕರಿ
ತಾ ಜೀವಮೃತವಾದಂತೆ ತ್ವಗಿಂದ್ರಿಯ. | 4 |
ಪೂಸಿಪ ಗಂಧ ಚಂದನ ಪರಿಮಳಗಳ
ವಾಸಿಸುವಂತೆ ಲಿಂಗಾನುಭವದ ಜ್ಞಾನ
ವಾಸನೆಯರಿಯದೆ ಸಂಪಿಗೆಗಳಿ ಮಡಿದಂದದಿ
ನಾಸಿಕೇಂದ್ರಿಯ ಇವೈದರಿಂದಲಿ ಮಹಾ
ದೋಷಕೀಡಾದೆ ಪಡುವಿಡಿ ಸಿದ್ಧಮ-
ಲ್ಲೇಶಾ ಎನ್ನನು ಕಾಯಿದು ರಕ್ಷಿಸು ಕರುಣಾಂಬುವೆ. | 5 |
Art
Manuscript
Music
Courtesy:
Transliteration
An'yaviṣaya pan̄cēndriyavendemba
kunnigaḷa baleyoḷagirisabēḍavo guruve.
Haraguru nindekārara kāvyakathegaḷa
oredu kēḷuvarennaveraḍu kiviyu tā
hiḍidākārake bāyaderadu ran̄jisutalihe
paramātmana śruti mantrāgamaṅgaḷa
viracisalollade kuriya danige huli
śarīravanaḷidante karṇēndriya dēva. | 1 |
An'yagōṣṭhiya paranindyagaḷa nuḍivare
ennā nālage harivuduruganante
`ōnnamaḥśivāya'yemba mantrava neneyadalli
tanna tā hindakke sēdutalide karmi
ginnento hēḷā guruve mānsada savige mīnu
tanna dēhavanaḷidante jihvēndriyavu. | 2 |
Paradhana parastrīyarāṭa nōṭagaḷanu
nere nōḍuvarenna nayana tiguriyante
tirugutalige sadā an'yāyavanāśrayisi
haraguruliṅga pūjege animiṣadr̥ṣṭi
irisi nōḍade tā pataṅga hāriye bandu
uriyoḷu maḍidante nayanēndriya dēvā. | 3 |
Jūju pagaḍi lettanāḍi paranāriyara
vājiyindali hiḍideḷevare dvihasta
rājisutide ramyavāgi, haraguruliṅgada
pūjeya māḍēnendare kai ēḷade karma
bhājanadoḷu silki sparśēndriyadi kari
tā jīvamr̥tavādante tvagindriya. | 4 |
Pūsipa gandha candana parimaḷagaḷa
vāsisuvante liṅgānubhavada jñāna
vāsaneyariyade sampigegaḷi maḍidandadi
nāsikēndriya ivaidarindali mahā
dōṣakīḍāde paḍuviḍi sid'dhama-
llēśā ennanu kāyidu rakṣisu karuṇāmbuve. | 5 |
ಸ್ಥಲ -
ಪಂಚೇಂದ್ರಿಯ ನಿರಸನಸ್ಥಲ