Index   ವಚನ - 161    Search  
 
ಒಡಲಾಸೆಗೆ ಅನ್ಯರ ಸೇವೆಯ ಮಾಡುವ ಕಡುಪಾಪಿಮನವೆ ಕೇಳು. ದಧಿಯ ಮಥನವ ಮಾಡೆ ಪಂಚಾಮೃತವ ಕೊಡುವುದಲ್ಲದೆ, ಉದಕವ ಕಡೆಯಲೇನ ಕೊಡದ ತೆರದಲ್ಲಿ ಅನ್ಯರನಾಸೆಗೈದರೆ- ಪರುಷ ಮನೆಯೊಳಿರೆ ಪರರ ಹಣವ ಬೇಡಿ ಚಾಲಿವರಿವ ಮರುಳುಮಾನವನಂತೆ, ವರ ಅಮೃತಬಾವಿ ಗೃಹದೊಳಿರೆ ಸವುಳು ನೀರಿಂಗೆ ಚಾಲಿವರಿವ ಹೆಡ್ಡಮನುಜನಂತೆ, ಸರ್ವರ ಮನ ಧರ್ಮ ಕರ್ಮವನರಿವ ಪರಮಾತ್ಮ ನಿನ್ನ ಅಂಗೈಕರದೊಳಿರೆ ಪರರಾಸೆಗೈಯದಿರು, ಆಸೆಗೈಯದಿರು. ಆಸೆಗೈ ಆಸೆಗೈ ನಮ್ಮ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವನಾಸೆಗೈದರೆ ನಿನಗೆ ಮುಕ್ತಿಯುಂಟು ಕೇಳಲೆ ಮನುಜ.