Index   ವಚನ - 177    Search  
 
ಹೆಣ್ಣಿನ ಮುದ್ದುಮುಖ ಮೊಲೆ ಮೋಹನ ಮುಗುಳುನಗೆಯ ಕಣ್ಣಿಂದ ಕಂಡು ಕಾಮಾತುರದಿಂದ ತಿಲದಷ್ಟು ಸುಖಕ್ಕಾಗಿ ಬಣ್ಣಗುಂದಿ ಭ್ರಮಿತರಾದರು ನೋಡಾ ಮನುಜರು. ತೆರನರಿಯದೆ ಹೆಣ್ಣಿನ ಮುಖಕಳೆ ತನ್ನ ಕೆಡಿಸುವ ಬಣ್ಣದ ಛಾಯೆಯೆಂದರಿಯರು ನೋಡಾ. ಹೆಣ್ಣಿನ ಸೋಲ್ಮಡಿ ತಮ್ಮ ಕಟ್ಟುವ ಪಾಶವೆಂದರಿಯದೆ ಹೆಣ್ಣಿನ ಮುಗುಳನಗೆ ತಮ್ಮ ಮುದ್ದಿಸಿ ಭವಕೆ ತರುವ ಮೋಹವೆಂದರಿಯರು ನೋಡಾ. ಹೆಣ್ಣಿನ ಚುಂಬನ ತಮ್ಮ ಹೀರುವ ಭೂತವೆಂದರಿಯರು ನೋಡಾ. ಹೆಣ್ಣಿನ | ನೋಟ ತಮ್ಮ ಇರಿವ ಕಠಾರಿಯೆಂದರಿಯರು ನೋಡಾ. ಹೆಣ್ಣಿನ ಮೊಲೆ ತಮ್ಮ ಭವಕ್ಕಿಕ್ಕಿ ಈಡಿಸುವ ಗುಂಡೆಂದರಿಯರು ನೋಡಾ. ಹೆಣ್ಣಿನ ಯೋನಿ ತಮ್ಮ ತಿರುಹುವ ಗಾಣವೆಂದರಿಯರು ನೋಡಾ. ಇಂತಪ್ಪ ಹೆಣ್ಣಿನ ಮುದ್ದುಮುಖ ಮೊಲೆ ನೋಟ ಮುಗುಳನಗೆ ಚುಂಬನ ಭವದ ಭ್ರಾಂತಿಗೆ ತರಿಸಿ ಹಿಂಡಿ ಹೀರಿ ಹಿಪ್ಪೆಯ ಮಾಡಿ ನುಂಗುವ ಮೃತ್ಯುದೇವತೆಯೆಂದರಿಯರು ನೋಡಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.