Index   ವಚನ - 1210    Search  
 
ತನ್ನಿಂದ ತನ್ನ ನೋಡಲು, ತನಗೆ ತಾ ಪ್ರತ್ಯಕ್ಷನಾಗೆ ಆ ಪ್ರತ್ಯಕ್ಷವೆಂಬುದೆ ಭ್ರಾಂತು ನೋಡಾ! ಅದೇನು ಕಾರಣವೆಂದಡೆ; ತನಗೆ ತಾನು ಅನ್ಯವಲ್ಲಾಗಿ, ಎನಗೆ ಅನ್ಯವಿಲ್ಲ. ಅನ್ಯ ನಾನಲ್ಲ ಎಂದು, `ಬ್ರಹ್ಮವು ನಾನು' ಎಂಬೆಡೆ- ಅದು ಅತಿಶಯದಿಂದ ಭ್ರಾಂತು-ಎಂಬುದನು ತಿಳಿದು ನೋಡಾ. ಅದೇನು ಕಾರಣವೆಂದಡೆ: `ಬ್ರಹ್ಮಕ್ಕೆ ನಾ ಬ್ರಹ್ಮ' ಎಂಬುದು ಘಟಿಸದಾಗಿ! ಅತಿಶಯದ ಸುಖವಳಿದ ನಿರಂತರ ಸುಖವೆಂತುಟೆಂದಡೆ ಗುರು ಮುಗ್ಧನಾದೆಡೆಯ ತಿಳಿಯಲು ನೋಡಲು ಗುಹೇಶ್ವರಲಿಂಗದ ನಿಲವು ತಾನೆ.