Index   ವಚನ - 276    Search  
 
ಏನೆಂದು ಉಪಮಿಸುವೆನಯ್ಯಾ ಶ್ರೀಪಂಚಾಕ್ಷರಿಯ! ಏನೆಂದು ಬಣ್ಣಿಸುವೆನಯ್ಯಾ ಶ್ರೀಪಂಚಾಕ್ಷರಿಯ! ನೆನೆವಡೆನ್ನ ಮನ ಸಾಲದು, ನುಡಿವಡೆನ್ನ ಜಿಹ್ವೆ ಸಾಲದು, ಕೇಳುವಡೆನ್ನ ಕರ್ಣ ಸಾಲದು. ಮನಮುಟ್ಟಿ ನೆನೆದು ಶ್ರೀ ಪಂಚಾಕ್ಷರಿಯ, ಜಿಹ್ವೆಮುಟ್ಟಿ ಸ್ತುತಿಸಿ ಶ್ರೀಪಂಚಾಕ್ಷರಿಯ, ಕರ್ಣಮುಟ್ಟಿ ಕೇಳಿ ಶ್ರೀಪಂಚಾಕ್ಷರಿಯ ನಾನು ಅಡಿಗಡಿಗೆ ನಿತ್ಯಮುಕ್ತನಾಗಿದ್ದೆನು ಕಾಣಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.