Index   ವಚನ - 297    Search  
 
ಬಸವಣ್ಣ ಶ್ರುತಿಸಿದ ವಾಕ್ಯದಿಂದ ಗುರುವೆಂಬ ಮಹಿಮೆಯ ಕಂಡೆನಯ್ಯಾ! ಬಸವಣ್ಣ ಶ್ರುತಿಸಿದ ವಾಕ್ಯದಿಂದ ಲಿಂಗಸಾವಧಾನದ ಗೊತ್ತಿನ ಪರಿಣಾಮದ ಸುಖದ ಸುಗ್ಗಿಯ ಕಂಡೆನಯ್ಯಾ! ಬಸವಣ್ಣ ಶ್ರುತಿಸಿದ ವಾಕ್ಯದಿಂದ ಪಾದೋದಕ ಪ್ರಸಾದವ ನಿತ್ಯ ನಾ ಸೇವಿಸಿ ಭವದಗ್ಧನಾದೆನಯ್ಯಾ! ಬಸವಣ್ಣ ಶ್ರುತಿಸಿದ ವಾಕ್ಯದಿಂದ ಭಕ್ತಿ ಉನ್ನತವೆಂದು ನಂಬಿದೆನಯ್ಯಾ! ಅದೇನು ಕಾರಣವೆಂದರೆ: ಸಿರಿಗಂಧದೊತ್ತಿಲಿದ್ದ ಜಾಲಿಗೆ ಪರಿಮಳ ಬಾರದಿಹುದೇನಯ್ಯಾ? ಮರುಗದಗಿಡದೊತ್ತಿಲಿದ್ದ ಗರಗಕ್ಕೆ ಪರಿಮಳ ಬಾರದಿಹುದೇನಯ್ಯಾ? ಬಸವಣ್ಣನ ಸೆರಗ ಸೋಂಕಿದ ಮನುಜರೆಲ್ಲ ಶಿವಗಣಂಗಳಾಗದಿಹರೇನಯ್ಯಾ? ಇದು ಕಾರಣ, ಬಸವಣ್ಣನ ವಚನಾಮೃತವ ದಣಿಯಲುಂಡು ತೇಗಿದರೆ ಪಾತಕಕೋಟಿ ಪರಿಹಾರವಾಗದಿಹದೇನಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ?