Index   ವಚನ - 58    Search  
 
ಅವಿರಳಪರಶಿವಲಿಂಗಕ್ಕೆ ಕ್ರಿಯಾಶಕ್ತಿ ಪಾದಸೇವೆಯ ಮಾಡುತಿರ್ದಳು ಆಚಾರಲಿಂಗವೆನ್ನ ಪ್ರಾಣನಾಥನೆಂದು. ಜ್ಞಾನಶಕ್ತಿಯು ಸವಿನಯಮಾತಿನಿಂದ ಮಜ್ಜನಮಾಡಿಸುತ್ತಿಹಳು ಗುರುಲಿಂಗವೆನ್ನ ಪ್ರಾಣನಾಥನೆಂದು. ಇಚ್ಫಾಶಕ್ತಿಯು ಇಚ್ಫೆಯ ಗ್ರಹಿಸುತ್ತಿಹಳು ಶಿವಲಿಂಗವೆನ್ನ ಪ್ರಾಣನಾಥನೆಂದು. ಆದಿಶಕ್ತಿಯು ಪೂಜಾನುಕೂಲೆಯಾಗಿಹಳು ಜಂಗಮಲಿಂಗವೆನ್ನ ಪ್ರಾಣನಾಥನೆಂದು. ಪರಾಶಕ್ತಿಯು ಮಂತ್ರ ಧ್ಯಾನ ಜಪ ಸ್ತೋತ್ರದಿಂದ ಸ್ತುತಿಯಮಾಡುತ್ತಿಹಳು ಪ್ರಸಾದಲಿಂಗವೆನ್ನ ಪ್ರಾಣನಾಥನೆಂದು. ಚಿಚ್ಛಿಕ್ತಿಯು ಪರಮಸುಖಾನಂದವ ತೋರುತ್ತಿಹಳು ಮಹಾಲಿಂಗವೆನ್ನ ಪ್ರಾಣನಾಥನೆಂದು. ಇಂತು ಷಡ್ವಿಧಶಕ್ತಿಯರೆನ್ನಲ್ಲಿ ನಿಂದು, ನಿರಂಜನ ಚನ್ನಬಸವಲಿಂಗವೆನ್ನ ಪ್ರಾಣನಾಥನೆಂದು ಕರಸ್ಥಲವಿಡಿದಾನಂದಿಸುತ್ತಿಹರು.