ಕಾಣಬಾರದ ಲಿಂಗ ಕಣ್ಣಮುಂದೆ ಬಂದಲ್ಲಿ
ಮಾಣಬಾರದ ಭಕ್ತಿಯ ಮಾಡುವುದೇ ಲೇಸು.
ನಡೆಯಿಲ್ಲದ ಲಿಂಗ ನಡೆದುಬಂದಲ್ಲಿ
ಒಡವೆರೆದು ಕೊಟ್ಟು ಕೊಂಡು ಭಕ್ತಿಯ ಮಾಡುವುದೇ ಸಹಜ.
ನುಡಿಯಿಲ್ಲದ ಲಿಂಗ ನುಡಿದು ಬಂದಲ್ಲಿ
ಬಡಿವಾರನುಳಿದು ಬಾಗಿ ಕಡವರ ಕಂಡ ಬಡವನಂತೆ
ಮುಡಿಯಿಕ್ಕಿ ಮುಂಬರಿದು ಭಕ್ತಿಯ ಮಾಡುವುದೇ ಸತ್ಯ.
ಇಂತು, ಗುರುಲಿಂಗಜಂಗಮವ
ಕಂಡು ಕಂಡು ಕಾಣದೆ ಮಾಡುವುದು
ಬೇರಿಲ್ಲ ತಾನೇ ಗುರುನಿರಂಜನ ಚನ್ನಬಸವಲಿಂಗಾ.