ದಿವದಿವಸಾನು ಅವಸ್ಥಾತ್ರಯದೊಳಾಲೋಚನೆಯಂಗೆಯ್ಯುತಿರ್ದೆನವ್ವಾ.
ಕೆಳದಿಯರೊಂದಾಗಿ ಬೆಳುದಿಂಗಳೊಳು ನಿಂದು
ಕಳವಳಗೊಂಡು ಸುಳುಹನಾಲಿಸುತಿರ್ದೆನವ್ವ,
ಎನ್ನಂಗಳ ಮುಂದೆ ಆತ ಸನ್ನಿಹಿತ ಬಂದರೆ
ನೋತ ಫಲ ಸಂಭವಿಸಿತ್ತೆನಗವ್ವ.
ಕಾಯದಣಿವಂತೆ ಮಾಡಿ ಮುಂದುಗೊಂಡಿಪ್ಪೆ,
ಮನದಣಿವಂತೆ ನೋಡಿ ಮುಂದುಗೊಂಡಿಪ್ಪೆ,
ಪ್ರಾಣದಣಿವಂತೆ ನೀಡಿ ಮುಂದುಗೊಂಡಿಪ್ಪೆನವ್ವ.
ಭಾವದಣಿವಂತೆ ಸಮಸುಖಾನಂದದೊಳೋಲಾಡುತ್ತ ಮುಂದುಗೊಂಡಿಪ್ಪೆ.
ಗುರುನಿರಂಜನ ಚನ್ನಬಸವಲಿಂಗ ಶರಣರೆನ್ನ
ಮನೆಗೆ ಬರುವಂತೆ ಮಾಡಾ ಎಲೆ ಅವ್ವಾ.