Index   ವಚನ - 260    Search  
 
ಅತ್ತಿತ್ತಲುಗದೆ ತನು ತರಹರವಾಯಿತ್ತು ನಿಮ್ಮಡಿಗೆ. ಸಂಚಲವಳಿದುಳಿದೀ ಮನವು ಒಲಿದು ಉಲಿಯುತ್ತಿದೆ ನಿಮ್ಮ ನೆನವಿಂಗೆ. ವಂಚನೆಯ ಜರೆದು ಮರೆದು ನೆರೆದಿಪ್ಪವು ನಿಮ್ಮ ಸುಳುಹಿನ ಬರವ ಪಂಚೇಂದ್ರಿಯಗಳು. ಇಚ್ಫೆ ಆಮಿಷ ಅಳಿದುಳಿದು ಆಚ್ಫಾದಿಸಿ ಆಹ್ವಾನಿಸುತಿರ್ದವು ನಿಮ್ಮತ್ತ ಪಂಚವಿಷಯಗಳು. ಇಂತು ಸಕಲ ಸಂಭ್ರಮ ನೆರವಿಯೊಳೊಂದಿ ಪರವಶದೊಳಿರ್ದೆನು ಪರಮಗುರು ಚರಲಿಂಗವೆ, ಅರಿದರಿದೆನ್ನವಧರಿಸು ಅಪ್ರತಿಮ ಗುರುನಿರಂಜನ ಚನ್ನಬಸವಲಿಂಗಾ.