Index   ವಚನ - 298    Search  
 
ಅಯ್ಯಾ, ಎನ್ನಾಧಾರಚಕ್ರದಲ್ಲಿ ಕರ್ಮಸಾದಾಖ್ಯ ಹೊಂದಿ, ನಿವೃತ್ತಿಕಲಾಪರ್ಯಾಯನಾಮವನುಳ್ಳ ಕ್ರಿಯಾಶಕ್ತಿಸಮೇತವಾದ ಆಚಾರಲಿಂಗವ ಧರಿಸಿಪ್ಪೆನಾಗಿ ಅಲುಪ್ತಶಕ್ತಿತ್ವಾನುಭಾವಿಯಾದೆನಯ್ಯಾ. ಎನ್ನ ಸ್ವಾಧಿಷ್ಠಾನಚಕ್ರದಲ್ಲಿ ಕರ್ತೃಸಾದಾಖ್ಯ ಹೊಂದಿ ಪ್ರತಿಷ್ಠಾಕಲಾಪರ್ಯಾಯನಾಮವನುಳ್ಳ ಜ್ಞಾನಶಕ್ತಿಸಮೇತವಾದ ಗುರುಲಿಂಗವ ಧರಿಸಿಪ್ಪೆನಾಗಿ ಸ್ವತಂತ್ರತ್ವಾನುಭಾವಿಯಾದೆನಯ್ಯಾ. ಎನ್ನ ಮಣಿಪೂರಕಚಕ್ರದಲ್ಲಿ ಮೂರ್ತಿಸಾದಾಖ್ಯ ಹೊಂದಿ ವಿದ್ಯಾಕಲಾಪರ್ಯಾಯನಾಮವನುಳ್ಳ ಇಚ್ಫಾಶಕ್ತಿಸಮೇತವಾದ ಶಿವಲಿಂಗವ ಧರಿಸಿಪ್ಪೆನಾಗಿ ನಿತ್ಯತ್ವಾನುಭಾವಿಯಾದೆನಯ್ಯಾ. ಎನ್ನ ಅನಾಹತಚಕ್ರದಲ್ಲಿ ಅಮೂರ್ತಿಸಾದಾಖ್ಯ ಹೊಂದಿ ಶಾಂತಿಕಲಾಪರ್ಯಾಯನಾಮವನುಳ್ಳ ಆದಿಶಕ್ತಿಸಮೇತವಾದ ಜಂಗಮಲಿಂಗವ ಧರಿಸಿಪ್ಪೆನಾಗಿ ಅನಾದಿಬೋಧತ್ವಾನುಭಾವಿಯಾದೆನಯ್ಯಾ. ಎನ್ನ ವಿಶುದ್ಧಿಚಕ್ರದಲ್ಲಿ ಶಿವಸಾದಾಖ್ಯ ಹೊಂದಿ ಶಾಂತ್ಯತೀತಕಲಾಪರ್ಯಾಯನಾಮವನುಳ್ಳ ಪರಶಕ್ತಿಸಮೇತವಾದ ಪ್ರಸಾದಲಿಂಗವ ಧರಿಸಿಪ್ಪೆನಾಗಿ ಸರ್ವಜ್ಞತ್ವಾನುಭಾವಿಯಾದೆನಯ್ಯಾ. ಎನ್ನ ಅಜ್ಞಾಚಕ್ರದಲ್ಲಿ ಮಹಾಸಾದಾಖ್ಯ ಹೊಂದಿ ಶಾಂತ್ಯತೀತೋತ್ತರೆಕಲಾಪರ್ಯಾಯನಾಮವನುಳ್ಳ ಚಿಚ್ಛಕ್ತಿ ಸಮೇತವಾದ ಮಹಾಲಿಂಗವ ಧರಿಸಿಪ್ಪೆನಾಗಿ ತೃಪ್ತತ್ವಾನುಭಾವಿಯಾದೆನಯ್ಯಾ. ಇಂತು ಎನ್ನ ಷಡಂಗದಲ್ಲಿ ಷಡುಲಿಂಗವ ಧರಿಸಿ ಷಟ್‍ಸ್ಥಲಜ್ಞಾನಾನುಭಾವಿಯಾದೆನಯ್ಯಾ ಗುರುನಿರಂಜನ ಚನ್ನಬಸವಲಿಂಗಾ ನಿಮ್ಮಲ್ಲಿ.