Index   ವಚನ - 340    Search  
 
ನಾವು ಗುರುಲಿಂಗಜಂಗಮಪ್ರಸಾದಿಗಳೆಂದು ಹೇಳಿಕೊಂಡು ನಡೆವ ಅಬದ್ಧ ಮೂಢಮನುಜರನೇನೆಂಬೆನಯ್ಯಾ! ಗುರುಪ್ರಸಾದಿಯಾದಡೆ, ಕಾಯಗುಣವಳಿದು ಪರಸ್ತ್ರೀಸಂಗ ಪರದ್ರವ್ಯ ಅಪಹರಣ ಅಭಕ್ಷಭಕ್ಷಣ ಹಿಂಸಾದಿಗಳನಳಿದುಳಿದಿರಬೇಕು. ಲಿಂಗಪ್ರಸಾದಿಯಾದಡೆ ಹುಸಿ ನಿಷ್ಠುರಾದಿ ವಾಕ್‍ದೋಷಂಗಳನಳಿದಿರಬೇಕು. ಜಂಗಮಪ್ರಸಾದಿಯಾದಡೆ ಆಸೆ ಆಮಿಷ ದುರ್ಮೋಹಾದಿಗಳನಳಿದಿರಬೇಕು. ಇಂತಲ್ಲದೆ ಕರಣತ್ರಯವಳಿಯದೆ ಕರ್ಮತ್ರಯವನುಂಬ ಕಾಳಕೂಳರಿಗೆ ತ್ರಿವಿಧಪ್ರಸಾದವೆಲ್ಲಿಹದಯ್ಯಾ? ನಮ್ಮ ಗುರುನಿರಂಜನ ಚನ್ನಬಸವಲಿಂಗದ ನಿಜಪ್ರಸಾದಿಗಳಿಗಲ್ಲದೆ.