Index   ವಚನ - 362    Search  
 
ಅರಿಯಬಲ್ಲ ಹಿರಿಯರೆಂದು ನೋಡಿಕೊಡುವರಯ್ಯಾ ಅಜ್ಞಾನಿಗಳು. ಲಿಂಗವಬಲ್ಲ ಸಂಗವಿರಹಿತರೆಂದು ಮುಟ್ಟಿಕೊಡುವರಯ್ಯಾ ಅಂಗಹೀನರು. ಜಂಗಮಾರ್ಪಿತವಬಲ್ಲ ಜಗದಾರಾಧ್ಯರೆಂದು ಸವಿದುಕೊಡುವರಯ್ಯಾ ಜಿಹ್ವೆಲಂಪಟರು. ಪ್ರಸಾದವಬಲ್ಲ ಪ್ರಸಾದಿಗಳೆಂದು ಕೇಳಿಕೊಡುವರಯ್ಯಾ ಶಬ್ದಹೀನರು. ಸಾವಧಾನಭಕ್ತಿಯ ವಾಸನೆಯ ಬಲ್ಲವರೆಂದು ಸೇವಿಸಿಕೊಡುವರಯ್ಯಾ ಮೂಕೊರೆಯರು. ಮಹಾತೃಪ್ತಿಯ ಬಲ್ಲ ಸದುಹೃದಯರೆಂದು ಪರಿಣಾಮಿಸಿಕೊಡುವರಯ್ಯಾ ಅಂತಃಶೂನ್ಯರು. ಗುರುನಿರಂಜನ ಚನ್ನಬಸವಲಿಂಗದ ನಿಜವನರಿಯದೆ ವಾಗ್ಭ್ರಹ್ಮವ ನುಡಿವರಯ್ಯಾ ಉಚ್ಛಿಷ್ಟಭುಂಜಕರು.