ವಚನ - 1270     
 
ನರರು ಸುರರು ಕಿನ್ನರರು ಮೊದಲಾದವರೆಲ್ಲರೂ ಪಿಂಡವೆಂಬ ಭಾಂಡದಲ್ಲಿಯೆ ಅಡಗಿಹರಾಗಿ, ನಾನವರ ರೂಹಿಸಿ ಬಲ್ಲೆನೆ ಅಯ್ಯಾ? ದೇವಗಣ ರುದ್ರಗಣ ಪ್ರಮಥಗಣ ಮೊದಲಾದವರೆಲ್ಲರೂ ಬ್ರಹ್ಮಾಂಡವೆಂಬ ಭಾಂಡದಲ್ಲಿಯೆ ಅಡಗಿಹರಾಗಿ ನಾನವರ ಭಾವಿಸಿ ಬಲ್ಲೆನೆ ಅಯ್ಯಾ? ಸತ್ಯರು ನಿತ್ಯರು ಮುಕ್ತರು ಮಹಾಮಹಿಮರೆಲ್ಲರು ಚಿದ್ಬ್ರಹ್ಮಾಂಡವೆಂಬ ಭಾಂಡದಲ್ಲಿಯೆ ಅಡಗಿಹರಾಗಿ ನಾನವರ ಅರಿದು ಬಲ್ಲೆನೆ ಅಯ್ಯಾ? ಇಂತೀ ತ್ರಿಭಾಂಡವನೊಳಕೊಂಡ ಅಖಂಡಿತ ಪರಿಪೂರ್ಣವಪ್ಪ ಭಾಂಡವೆ, ತನ್ನ ಇರವೆಂದರಿದ ನಿಜಲಿಂಗೈಕ್ಯನ ಉಪಮಿಸಲಿಲ್ಲ, ಉಪಮಿಸಲಿಲ್ಲಾಗಿ ರೂಹಿಸಲಿಲ್ಲ, ರೂಹಿಸಲಿಲ್ಲಾಗಿ ಭಾವಿಸಲಿಲ್ಲ, ಭಾವಿಸಲಿಲ್ಲಾಗಿ ಅರಿಯಲಿಲ್ಲ! ಅರಿಯಲಿಲ್ಲದ ಅರಿವೆ ತಾನಾಗಿ, ಗುಹೇಶ್ವರನೆಂಬುದು ಬೇರಿಲ್ಲ.