Index   ವಚನ - 573    Search  
 
ಕ್ರಿಯಾಶಕ್ತಿ ಸಮೇತ ಅಚಾರಲಿಂಗವನು ಪೃಥ್ವಿತತ್ವದಲ್ಲಿರಿಸಿ ಸದ್ವಾಸನೆಯೊಳು ಚರಿಸುತಿರ್ದನು. ಜ್ಞಾನಶಕ್ತಿಸಮೇತ ಗುರುಲಿಂಗವನು ಅಪ್ಪುತತ್ವದಲ್ಲಿರಿಸಿ ಸದ್ರುಚಿಯೊಳು ಚರಿಸುತಿರ್ದನು. ಇಚ್ಛಾಶಕ್ತಿಸಮೇತ ಶಿವಲಿಂಗವನು ಅಗ್ನಿತತ್ವದಲ್ಲಿರಿಸಿ ಸುರೂಪಿನೊಳು ಚರಿಸುತಿರ್ದನು. ಆದಿಶಕ್ತಿಸಮೇತ ಜಂಗಮಲಿಂಗವನು ವಾಯುತತ್ವದಲ್ಲಿರಿಸಿ ಸುಸ್ಪರ್ಶನದಲ್ಲಿ ಚರಿಸುತಿರ್ದನು. ಪರಾಶಕ್ತಿಸಮೇತ ಪ್ರಸಾದಲಿಂಗವನು ಆಕಾಶತತ್ವದಲ್ಲಿರಿಸಿ ಸುಶಬ್ದದಲ್ಲಿ ಚರಿಸುತಿರ್ದನು. ಚಿತ್‍ಶಕ್ತಿಸಮೇತ ಮಹಾಲಿಂಗವನು ಆತ್ಮತತ್ವದಲ್ಲಿರಿಸಿ ಸುತೃಪ್ತಿಯಲ್ಲಿ ಚರಿಸುತಿರ್ದನು. ಇಂತಿಷ್ಟಲಿಂಗವನು ಕಂಗಳ ಮುಂದೆ ಇರಿಸಿ ಹಿಂಗದನಿಮಿಷನಾಗಿರ್ದನು ಗುರುನಿರಂಜನ ಚನ್ನಬಸವಲಿಂಗ.