ಅಂತರಂಗದಲ್ಲಿ ಪರಿಪೂರ್ಣಜ್ಞಾನವಿರ್ದು
ಬಹಿರಂಗದಲ್ಲಿ ವಿನೋದ ಕಾರಣ ಚರಿಸಿದೊಡೆ,
ಅಂತರಂಗದಲ್ಲಿ ವಿಪರೀತ ದುಸ್ಸಾರಭರಿತವಾ
ಬಹಿರಂಗದ ವೇಷರು ಹೆಂಡದ ಭಾಂಡದಂತೆ
ತಮ್ಮ ತಾವರಿಯದೆ ಮುಂದುಗಾಣದೆ ನೋಯಿಸಿ ನುಡಿವರಯ್ಯಾ,
ಅದು ತಾಗಲಮ್ಮದು.
ಉಷ್ಣಕ್ಕೆ ನೊಂದು ಸೂರ್ಯಂಗೆ ಭೂಬಂಡು ನೆಗೆದೊಗೆದರೆ
ತನಗಲ್ಲದೆ ತಾಗಲರಿಯದು.
ಇದು ಕಾರಣ ಈ ಒಡಲಗಿಚ್ಚಿನ ತುಡುಗುಣಿಗಳ
ಎನ್ನತ್ತ ತೋರದಿರಯ್ಯಾ
ಗುರುನಿರಂಜನ ಚನ್ನಬಸವಲಿಂಗಾ,
ನಿಮ್ಮ ಧರ್ಮ ನಿಮ್ಮ ಧರ್ಮ.