Index   ವಚನ - 701    Search  
 
ಗಂಭೀರ ಗುಹೆಯೊಳಗಿಪ್ಪ ನಿರವಯ ಪರಮಾತ್ಮಲಿಂಗವನು ಅರುವಿನಮುಖದಿಂದ ಅಂಗ ಭಾವದ ಕಳೆಯೊಳು ನಿಂದು ಕರಸ್ಥಲಕ್ಕೆಯ್ದಿಸಿ, ನಯನಸ್ಥಲವೆರಸಿ ಹೃದಯಸ್ಥಲಕ್ಕೊಯ್ದು ಭೃಕುಟಿಸ್ಥಲದಲ್ಲಿರಿಸಿ ಮಂತ್ರಸ್ಥಲ ಕೂಡಿ ಲಯಸ್ಥಲದಲ್ಲಿ ಘನಸುಖಪರಿಣಾಮಿಯಾಗಿರ್ದ ಕಾಣಾ ನಿಮ್ಮ ಶರಣ. ಇಂತೀ ಸಗುಣ ನಿರವಯಾನಂದ ನಿಜಸುಖವನರಿಯಲರಿಯದೆ ಶೈವಾಗಮದ ನುಡಿಯವಿಡಿದು ಗಿರಿ ಗಹ್ವರ ನದಿಮೂಲ ಶರಧಿ ಕಾಂತಾರ ಕಾಶಿ ಮೊದಲಾದ ಕಂಡ ಕಂಡದುದಕ್ಕೆ ಹರಿದು ಹೋಗಿ ಅನ್ನೋದಕವ ಸಣ್ಣಿಸಿ ಸೊಪ್ಪು ಪಾಷಾಣಪುಡಿಯ ಕೊಂಡು ಕಷ್ಟಬಟ್ಟು ಕಾಣಲರಿಯದೆ ಕೆಟ್ಟುಹೋಗುವ ಭ್ರಷ್ಟರಿಗೆ ಜ್ಞಾನಿಯೆಂದು ನುಡಿವ ಶುನಕರಿಗೆ ನಾಯಕ ನರಕ ತಪ್ಪದು ಕಾಣಾ ಗುರುನಿರಂಜನ ಚನ್ನಬಸವಲಿಂಗಾ.