Index   ವಚನ - 711    Search  
 
ಅಯ್ಯಾ, ಎನ್ನ ಇಂದ್ರಿಯಂಗಳೆಲ್ಲ ನಿಮ್ಮ ಸೋಂಕಿನ ಸೊಬಗೆಂಬ ತವನಿಧಿಯಲ್ಲಿ ಮುಳುಗಿ, ಹಿಂದಿನ ಮುಂದಿನ ಬಂಧನದ ಸಂಕೋಲೆಯ ಕಳೆದಿರ್ದವಯ್ಯಾ. ಅಯ್ಯಾ, ಎನ್ನ ಕರಣಂಗಳೆಲ್ಲ ನಿಮ್ಮ ಮುಟ್ಟಿ ಮುಂದನರಿಯದೆ ಹಿಂದನರಿಯದೆ ಸಂದಸುಖದಲ್ಲಿ ಬಂದ ಪರಿಣಾಮದಲ್ಲಿ ಮುಳುಗಿ ಮತ್ತರಿಯದಿರ್ದವಯ್ಯಾ. ಅಯ್ಯಾ, ಎನ್ನ ವಿಷಯಂಗಳೆಲ್ಲ ನಿಮ್ಮ ಸಂಬಂಧಸಂವಿತ್ಪ್ರಭಾನಂದದೊಳು ಮುಳುಗಿ ಭಿನ್ನ ಸುಖವರಿಯದಿರ್ದವಯ್ಯಾ. ಅಯ್ಯಾ, ಗುರುನಿರಂಜನ ಚನ್ನಬಸವಲಿಂಗಾ ನಿನ್ನೊಡಲಗೊಂಡವನಾದಕಾರಣ ಕಾಣಯ್ಯಾ.