Index   ವಚನ - 783    Search  
 
ಮಹಾಜ್ಞಾನಿ ಜಂಗಮಲಿಂಗ ತಾನು ಲೋಕಪಾವನವಾಗಿ ನಡೆನುಡಿಗಳರಿದಾಚರಿಸುವಲ್ಲಿ, ಜಿಹ್ವೆಯಲ್ಲಿ ಹುಸಿನುಡಿಯಿಲ್ಲದೆ ತನ್ನ ತಾ ನುಡಿಯುತಿರ್ದ ಕಾಣಾ. ಕಂಗಳಲ್ಲಿ ಭಿನ್ನದೃಷ್ಟಿಯಿಲ್ಲದೆ ತನ್ನ ತಾ ನೋಡುತಿರ್ದ ಕಾಣಾ. ಶ್ರೋತ್ರದಲ್ಲಿ ಭಿನ್ನಶಬ್ದವಿಲ್ಲದೆ ತನ್ನ ತಾ ಕೇಳುತಿರ್ದ ಕಾಣಾ. ತ್ವಕ್ಕಿನಲ್ಲಿ ಭಿನ್ನ ಸೋಂಕಿಲ್ಲದೆ ತನ್ನ ತಾ ಸೋಂಕುತಿರ್ದ ಕಾಣಾ. ಘ್ರಾಣದಲ್ಲಿ ಭಿನ್ನವಾಸನೆಯಿಲ್ಲದೆ ತನ್ನ ತಾನ್ವಾಸಿಸುತಿರ್ದ ಕಾಣಾ. ಹೃದಯದಲ್ಲಿ ಮಾಯಾಸುಖವಿಲ್ಲದೆ ತನ್ನ ತಾ ಸುಖದಲ್ಲಿರ್ದ ಕಾಣಾ. ಗುರುನಿರಂಜನ ಚನ್ನಬಸವಲಿಂಗಾ ಮತ್ತೆ ಮರಣವಿಲ್ಲದೆ ನಿಮ್ಮಲ್ಲಿ ತನ್ನೊಳೈಕ್ಯ ಕಾಣಾ.