Index   ವಚನ - 802    Search  
 
ನಿರಂಜನ ಲಿಂಗಸನ್ನಿಹಿತ ನಿರಾಮಯ ಶರಣಂಗೆ ಖಂಡಿತವಿಟ್ಟು ನುಡಿವ ವರ್ಮಗೇಡಿ ಕುರಿಮನುಜರ ವಾಕ್ಪಟುತ್ವವ ನೋಡಾ! ಆದಿ ಅನಾದಿಯಿಂದತ್ತತ್ತಲಾದ ಮೂದೇವರರಿಯದ ಮಹದಾನಂದವೇ ಕಾರ್ಯಕಾರಣಾತೀತ ತನ್ನತನಗೆ ಸಕಲನಿಃಕಲಸೌಜನ್ಯವಾಯಿತ್ತು. ಆ ಸಚ್ಚಿದಾನಂದ ಪರಬ್ರಹ್ಮವೇ ಶರಣಲಿಂಗಸಂಬಂಧವೆಂಬುದಾದುದು. ಆ ಶರಣಲಿಂಗಸಂಬಂಧವೆ ತನ್ನ ವಿನೋದಕ್ಕೆ ತಾನೇ ಅಂಗವಾಗಿ, ಲಿಂಗವಾಗಿ, ಶಕ್ತಿಯಾಗಿ, ಭಕ್ತಿಯಾಗಿ, ಹಸ್ತವಾಗಿ, ಮುಖವಾಗಿ, ಪದಾರ್ಥವಾಗಿ, ಪ್ರಸಾದವಾಗಿ, ಅಷ್ಟಾವರಣವಾಗಿ, ಪೂಜ್ಯನಾಗಿ, ಪೂಜಕನಾಗಿ, ಉಪಕರಣವಾಗಿ ಇಂತು ತನ್ನ ತಾನಾನಂದಿಸಿ, ತನ್ನಲ್ಲಿ ತಾ ನಿರ್ವಯಲಾದರೆ ಮುಂದೇನರಿಯದೆ ನಿಂದೆಯ ಮಾಡುವ ಬೆಂದ ಮೂಢರಿಗೆ ಮುಂದೆ ವೈತರಣಿಯಿಂಬುಗೊಟ್ಟಿಹುದು ; ಗುರುನಿರಂಜನ ಚನ್ನಬಸವಲಿಂಗ ದೂರವಾಗಿಹನು.