Index   ವಚನ - 875    Search  
 
ಮದ ಮೋಹ ರಾಗ ವಿಷಾದ ತಾಪ ಶೋಕ ವೈಚಿಂತೆಯೆಂಬ ಸಪ್ತ ಮಲವನು, ಸಮತಾಜಲದಿಂದೆ ತೊಳೆದು ಭಾವನಿರ್ಮಲವ ಮಾಡಿ ಪರಶಿವಾನಂದಸ್ವರೂಪವು ಸಂಬಂಧವಾದ ಬಳಿಕ ಭಾವಲಿಂಗೈಕ್ಯ ತಾನೆ ನೋಡಾ. ತನುವ್ಯಸನ ಮನವ್ಯಸನ ಧನವ್ಯಸನ ಉತ್ಸಾಹವ್ಯಸನ ರಾಜ್ಯವ್ಯಸನ ವಿಶ್ವಾಸವ್ಯಸನ ಸೇವಕವ್ಯಸನವೆಂಬ ಸಪ್ತವ್ಯಸನವನು ವಿನಯಜಲದಿಂದೆ ತೊಳೆದು ಮನ ನಿರ್ಮಲ ಮಾಡಿ ಪರಶಿವನ ಚಿತ್ಸ್ವರೂಪ ಸಂಯೋಗವಾದ ಬಳಿಕ ಪ್ರಾಣಲಿಂಗೈಕ್ಯ ತಾನೇ ನೋಡಾ. ರಸ ರುಧಿರ ಮಾಂಸ ಮೇದಸ್ಸು ಅಸ್ತಿ ಮಜ್ಜೆ ಶುಕ್ಲವೆಂಬ ಸಪ್ತಧಾತುವಿನ ಕಳಂಕವ ಕರುಣಜಲದಿಂದೆ ತೊಳೆದು ತನು ನಿರ್ಮಲ ಮಾಡಿ ಪರಶಿವನ ಸತ್ತುರೂಪ ಸಮರಸವಾದ ಬಳಿಕ ಇಷ್ಟಲಿಂಗೈಕ್ಯ ತಾನೆ ನೋಡಾ. ಇದು ಕಾರಣ ಗುರುವಿನಿಂದುದಿಸಿ ಅಷ್ಟಾವರಣದಲ್ಲಿ ಬೆಳೆದು ಮಹಾಲಿಂಗೈಕ್ಯ ಮಹಾತ್ಮನಿಗೆ ಸಕಲ ಪ್ರಕೃತಿಯೊಂದುವೇಳೆ ಬೆರಸಲುಂಟೆ? ಭೂಮಲದೊಳೆದ ಜಲ ಶರಧಿಯೋಳ್ವೆರಸಿ ಶರಧಿಯಾದಂತೆ ಶರಣ ಜ್ಞಾನಶರಧಿಯೊಳ್ವೆರೆದ ಕರಣವೆಲ್ಲ ಕಿರಣಮಯವಾಗಿ ಕೂಡೆ ಗುರುನಿರಂಜನ ಚನ್ನಬಸವಲಿಂಗವ ಬೆರಸಿ ಬೇರಿಲ್ಲದಿರ್ದವು