Index   ವಚನ - 879    Search  
 
ಚಿದಾತ್ಮನೇ ಅಂಗವಾದ ಶರಣ ಚಿತ್ಪೃಥ್ವಿಯೇ ತನ್ನಂಗವಾಗಿ ಆಚಾರಲಿಂಗೈಕ್ಯವನರಿದು ಬಂದನಯ್ಯಾ. ಚಿದಪ್ಪುವೇ ತನ್ನಂಗವಾಗಿ ಚಿದ್ಗುರುಲಿಂಗೈಕ್ಯವನರಿದು ಬಂದನಯ್ಯಾ. ಚಿದಗ್ನಿಯೇ ತನ್ನಂಗವಾಗಿ ಚಿಚ್ಫಿವಲಿಂಗೈಕ್ಯವನರಿದು ಬಂದನಯ್ಯಾ. ಚಿದ್ವಾಯುವೇ ತನ್ನಂಗವಾಗಿ ಚಿಜ್ಜಂಗಮಲಿಂಗೈಕ್ಯವನರಿದು ಬಂದನಯ್ಯಾ. ಚಿದಾಕಾಶವೇ ತನ್ನಂಗವಾಗಿ ಚಿತ್ಪ್ರಸಾದಲಿಂಗೈಕ್ಯವನರಿದು ಬಂದನಯ್ಯಾ. ಗುರುನಿರಂಜನ ಚನ್ನಬಸವಲಿಂಗಾ, ನಿಮ್ಮ ಶರಣ ಚಿನ್ಮಹಾಲಿಂಗೈಕ್ಯವನರಿದು ಚಿದ್ರೂಪವಾಗಿರ್ದ ಕಾಣಾ.