Index   ವಚನ - 893    Search  
 
ಅಂಗವೆಂಬುವುದಿಲ್ಲ ಲಿಂಗವೇದಿ ಶರಣಂಗೆ, ಲಿಂಗವೆಂಬುವುದಿಲ್ಲ ಅಂಗಸಂಗಸನ್ನಿಹಿತ ಶರಣಂಗೆ, ಹಸ್ತವೆಂಬುವುದಿಲ್ಲ ಲಿಂಗನಿವಾಸ ಶರಣಂಗೆ, ಮುಖವೆಂಬುವುದಿಲ್ಲ ಸುಖಭರಿತ ಶರಣಂಗೆ, ಶಕ್ತಿಯೆಂಬುವುದಿಲ್ಲ ಮುಕ್ತಾಂಗ ಶರಣಂಗೆ, ಭಕ್ತಿಯೆಂಬುವುದಿಲ್ಲ ನಾದಬಿಂದು ಕಲಾಶೂನ್ಯ ಶರಣಂಗೆ. ಪದಾರ್ಥವೆಂಬುವುದಿಲ್ಲ ಗುರುಭಾವವಿರಹಿತ ಶರಣಂಗೆ, ಪ್ರಸಾದವೆಂಬುವುದಿಲ್ಲ ಗುರುನಿರಂಜನ ಚನ್ನಬಸವಲಿಂಗ ತಾನು ತಾನಾದ ಶರಣಂಗೆ.