Index   ವಚನ - 1115    Search  
 
ದೇಶಿಕಶಿವಯೋಗಿ ಭುವನಾಕಾಶವಿಡಿದು ದೇಶಾಂತರವ ಮಾಡುವ ಪರಿಯೆಂತೆಂದೊಡೆ: ಕನ್ನಡದೇಶದಿಂದೆ ನೋಡಿ, ಮರಾಠ ಮಲಯ ದೇಶವ ಹಿಂದೆ ಬಿಟ್ಟು, ಕೊಂಕಣದೇಶವಿಡಿದು ಕಲ್ಯಾಣಪುರವರಾಧೀಶ್ವರ ಬಸವರಾಜೇಂದ್ರನ ಕಂಡು ಶರಣುಹೋಗಬೇಕೆಂದು ಮಧ್ಯದೇಶದ ಧರ್ಮರಾಯನ ಕಂಡು ಮೂಕೋಟಿ ದ್ರವ್ಯವನಿತ್ತು ತೋರೆಂದಡೆ ಮುಟ್ಟಿ ಕರ್ನಾಟಕದೇಶದಿಂದೆ ತೋರಿದ ನೋಡಾ. ಕಂಡ ಕಲ್ಯಾಣದೊಳೊಪ್ಪುವ ಬಸವಣ್ಣಂಗೆ ಹೊರಗೊಳಗೊಳಗೆ ಕರಣತ್ರಯಗೂಡಿ ಚರಣಗಳ ಪಿಡಿದು ಸಕಲ ಜನರಿಗೆ ಉತ್ತರದೇಶದ ಪರಿಯನರುಪಲು ಸುಖಮುಖಿಗಳಾದರು. ಅಲ್ಲಿಂದೆ ಮೂಡಣದೇಶವ ತಿರುಗಿ, ಬಂಗಾಳದೇಶಕ್ಕೆ ದಕ್ಷಿಣವಾದ ನಂಜುಂಡನ ಜಾತ್ರೆಯ ನೋಡಲು, ಆ ನಂಜುಂಡನ ಜಾತ್ರೆಯ ಮುನ್ನವೆ ಕೂಡಲಸಂಗಮನಾಥನ ಜಾತ್ರೆಯಾಗಿ ಕಾಣುತಿರ್ದಿತ್ತು. ಆ ಜಾತ್ರೆಯೊಳು ನಿಂದು ಪಾಂಡವದೇಶದ ಸುಖವನು ಕುಂತಣದೇಶದತ್ತ ಆರು ಮಠವ ನಿರ್ಮಿಸಿದ ಆರು ದರ್ಶನ ಗತಿಮತಿಯನರಿದು ಕುಂಭಕೋಣೆಯ ರಂಭೆಯ ಕೈವಿಡಿದು, ಪಶ್ಚಿಮದೇಶದಲ್ಲಿ ಪರಮಹರುಷವೆರೆದು ಘನಗಂಭೀರ ಕಡಲೋಕುಳಿಯಾಡುತಿರ್ದು ಗುರುನಿರಂಜನ ಚನ್ನಬಸವಲಿಂಗಸನ್ನಿಹಿತ ಅನಂತ ದೇಶವ ಪಾವನಮಾಡಿ ಮೀರಿದ ದೇಶದತ್ತ ಸಾರಿದನು.