ನಕಾರಪಂಚಾಕ್ಷರವ ನೋಡಲು
ಓಂಕಾರದೊಡಲೊಳಗಾಗಿ ಕಾಣಿಸಿಕೊಳ್ಳುತ್ತಿಹವು.
ಮಕಾರಪಂಚಾಕ್ಷರವ ನೋಡಲು
ಓಂಕಾರದೊಡಲೊಳಗಾಗಿ ಕಾಣಿಸಿಕೊಳ್ಳುತ್ತಿಹವು.
ಶಿಕಾರಪಂಚಾಕ್ಷರವ ನೋಡಲು
ಓಂಕಾರದೊಡಲೊಳಗಾಗಿ ಕಾಣಿಸಿಕೊಳ್ಳುತ್ತಿಹವು.
ವಕಾರಪಂಚಾಕ್ಷರವ ನೋಡಲು
ಓಂಕಾರದೊಡಲೊಳಗಾಗಿ ಕಾಣಿಸಿಕೊಳ್ಳುತ್ತಿಹವು.
ಯಕಾರಪಂಚಾಕ್ಷರವ ನೋಡಲು
ಓಂಕಾರದೊಡಲೊಳಗಾಗಿ ಕಾಣಿಸಿಕೊಳ್ಳುತ್ತಿಹವು.
ಇಂತು ಪಂಚಾಕ್ಷರದ ನೆಲೆಯ ಮೇಲೆ ಓಂಕಾರವ ನೋಡಲು
ಗುರುನಿರಂಜನ ಚನ್ನಬಸವಲಿಂಗಾ
ತಾನಾಗಿ ಕಾಣಿಸಿಕೊಳ್ಳುತಿರ್ದ ಶರಣನು.