Index   ವಚನ - 1136    Search  
 
ಐವತ್ತಾರು ದೇಶದೊಳಗುಳ್ಳ ಸ್ಥಾವರಂಗಳ ತನ್ನೊಳಗುಳ್ಳ ಭಕ್ತಿಯಲ್ಲರಿದರ್ಚಿಸಬಲ್ಲರೆ ಶರಣ. ಆ ಶರಣ ಶಿವನಂತಿಪ್ಪ ನೋಡಿರೆ. ಕಾಲತ್ರಿಪುರವ ಸುಟ್ಟು ಬೂದಿಯನು ಸರ್ವಾಂಗದಲ್ಲಿ ಧರಿಸಿರ್ದ ನೋಡಿರೆ. ಸರ್ಪಾಭರಣಭೂಸಿತನಾಗಿ ಚಂದ್ರನ ಮಸ್ತಕದಲ್ಲಿ ತಳೆದುಕೊಂಡಿರ್ದ ನೋಡಿರೆ. ಬ್ರಹ್ಮಕಪಾಲ ಕೈಯಲ್ಲಿ ಪಿಡಿದು, ಮಾಯೆಯ ಗೆಲಿದ ನೋಡಿರೆ. ನಾರಾಯಣನ ಕಣ್ಣ ಪಾದದಲ್ಲಿರಿಸಿ, ಗಂಗೆ ಗೌರಿಯ ಸಂಪರ್ಕ ಒಳಹೊರಗೆ ಪರಿಪೂರ್ಣ ನೋಡಿರೆ, ತನ್ನೊಲುಮೆಯ ಇರವೆಯಲ್ಲಿ ಕೈಲಾಸಮಧ್ಯಪೀಠ ಪ್ರಕಾಶದೊಳಗು ನೋಡಿರೆ ಹುಟ್ಟಿ ಬೆಳೆದುದ ಸವರಿಬಿಟ್ಟು ಕಟ್ಟಾಳುಯೆನಿಸಿ ಕಾಣುವ ಗುರುನಿರಂಜನ ಚನ್ನಬಸವಲಿಂಗದೊಳಗೆ.