Index   ವಚನ - 1182    Search  
 
ಮಹಾಬಯಲು ನಿರ್ವಯಲು ನಿರವಯ ನಿರಂಜನ ನಿಃಶೂನ್ಯ ನಿಃಕಲ ಪರಶಿವಲಿಂಗವು ಆ ನೆನಹು ನಿರ್ಧರಿಸಿ ಚಿತ್ತೆನಿಸಿತ್ತು. ಆ ಚಿತ್ತಿನಿಂದೆ ಚಿನ್ನಾದ ಚಿದ್ಬಿಂದು ಚಿತ್ಕಳೆಯುದಯವಾಗಿ, ಆ ಮೂಲ ಚಿತ್ತುಗೂಡಿ, ಗಟ್ಟಿಗೊಂಡು ಗೋಲಾಕಾರ ತೇಜೋಮೂರ್ತಿಯಪ್ಪ ಮಹಾಲಿಂಗವಾಯಿತ್ತು. ಆ ಮಹಾ ಚಿದ್ಘನಲಿಂಗಕ್ಕೆ ಆ ಚಿತ್ತೆ ಅಂಗವಾಗಿ ಶಕ್ತಿಯೆನಿಸಿತ್ತು ನೋಡಾ. ಆ ಶಿವಶಕ್ತಿಗಳಿಂದೆ ಸಕಲಸಂಭ್ರಮವಾಯಿತ್ತು. ಆ ಸಕಲಸಂಭ್ರಮೈಶ್ವರ್ಯದೊಳಗೆ ಆ ಶಿವನ ಅನಂತ ಸಹಸ್ರ ಸಹಸ್ರಾಂಶದೊಳಗೊಂದಂಶ ಬೇರ್ಪಡಿಸಿ ಚಿದಾತ್ಮನಾಗಿ ಕಾಯಾಶ್ರಯಗೊಂಡು ನಿರ್ಮಿಸಿದಲ್ಲಿ, ಆ ಕಾಯಸಂಗ ಸಕಲನಿಃಕಲತತ್ವಾನ್ವಿತದಿಂದೆ ತನ್ನಾದಿಯ ಮರೆದು ಪರಾದಿ ಸ್ವಯವಾಗಿ, ಪಂಚಕೃತ್ಯಪರಿಯುತದಿಂದಿರ್ದ ಆತ್ಮನ ತೇರ್ಕಡೆಯಾಂತರವರಿದ ಶಿವ ತಾನೆ ಸುಜ್ಞಾನಗುರುವಾಗಿ ಅಂತರಂಗದಲ್ಲಿ ಬೆಳಗಲು, ಆ ಬೆಳಗಿನಿಂದೆ ಆತ್ಮನು ತನ್ನಾದಿ ಮಧ್ಯಾವಸಾನವನರಿದು, ಮಿಥ್ಯ ಮಾಯಾಸಂಸಾರಸಂಬಂಧವನಳಿಸಿ ತನ್ನ ಕಾಂಬಾವಸ್ಥೆಯ ಮುಂದೆ ಆ ಜ್ಞಾನಗುರುವೇ ಕ್ರಿಯಾಘನಗುರುವಾಗಿ ತೋರಲು ಅಜ್ಞಾನಕಲಾತ್ಮನು ಗುರೋಪಾಸ್ತೆಯ ಮಾಡುವ ನಿಲವರಿದು ಗುರುಕಾರುಣ್ಯದಿಂದಿಷ್ಟವನನುಗ್ರಹಿಸಿಕೊಡಲು ಆ ಲಿಂಗವಿಡಿದು ಧಾರಣವಾಗಿ, ಚಿದ್ಭಸಿತ ರುದ್ರಾಕ್ಷಿಯ ಧರಿಸಿ, ಪರಮಪಂಚಾಕ್ಷರ ಪ್ರಾಣವಾಗಿ, ಆ ಗುರುಲಿಂಗಕ್ಕೆ ಭಕ್ತಾಂಗನೆಯಾಗಿ ತ್ರಿವಿಧಾಚಾರವನರಿದು, ಷಟ್‍ಸ್ಥಲದಲ್ಲಿ ನಿಂದು ಚಿದಂಗ ಚಿಲ್ಲಿಂಗಭಾವದವಿರಳ ವಿನೋದಕ್ಕೆ ಭಾವತ್ರಿಸ್ಥಲವನುಂಟುಮಾಡಿಕೊಂಡಾಚರಿಸುತಿರ್ದ ತಾನೆ ನಮ್ಮ ಗುರುನಿರಂಜನ ಚನ್ನಬಸವಲಿಂಗವು.