Index   ವಚನ - 1349    Search  
 
ಪ್ರಥಮದಲ್ಲಿ ವಸ್ತು ಅನಿರ್ವಾಚ್ಯವಾಗಿದ್ದಿತ್ತು. ಆ ಅನಿರ್ವಾಚ್ಯವಾಗಿದ್ದ ಪರವಸ್ತು ತನ್ನ ಲೀಲೆಯಿಂದ ತಾನೇ ಪರಬ್ರಹ್ಮವೆಂಬ ನಾಮವಾಯಿತ್ತು! ಆ ನಾಮವನೆಯ್ದಿ ಕುಳವಾಯಿತ್ತು, ಆ ಕುಳದಿಂದ ಆತ್ಮನೆಂಬ ಲಿಂಗಸ್ಥಲವಾಯಿತ್ತು. ಆ ಕುಳುವು ಸ್ಥಳದೊಳಗೆಯ್ದಿ ಸ್ಥಳಕುಳವೆಂಬ ಎರಡಿಲ್ಲದೆ ನಿಂದಿತ್ತು. ಅದೆಂತೆಂದಡೆ: ವಾಙ್ಮನಕ್ಕಗೋಚರವಾದ ಪ್ರರಬ್ರಹ್ಮದಿಂದಾಯಿತ್ತು ಭಾವ, ಭಾವದಿಂದಾಯಿತ್ತು ಜ್ಞಾನ, ಜ್ಞಾನದಿಂದಾಯಿತ್ತು ಮನ, ಮನದಿಂದಾಯಿತ್ತು ಬುದ್ಧಿ, ಬುದ್ಧಿಯಿಂದಾಯಿತ್ತು ಚಿತ್ತ, ಚಿತ್ತದಿಂದಾಯಿತ್ತು ಅಹಂಕಾರ. ಇಂತು-ಅಹಂಕಾರ ಚಿತ್ತ ಬುದ್ಧಿ ಮನ ಜ್ಞಾನ ಭಾವ ಎಂದು ಆರಾದವು. ಈ ಆರೂ ಕೆಟ್ಟಲ್ಲದೆ ವಾಙ್ಮನಕ್ಕಗೋಚರವಾದ ಪರಬ್ರಹ್ಮವಾಗಬಾರದು. ಇದ ಕೆಡಿಸುವುದಕ್ಕೆ ಆರು ಸ್ಥಲವಾದವು. ಅವಾವೆಂದಡೆ: ಅಹಂಕಾರ ಅಡಗಿದಾಗ ಭಕ್ತಸ್ಥಲ, ಚಿತ್ತದ ಗುಣ ಕೆಟ್ಟಾಗ ಮಾಹೇಶ್ವರಸ್ಥಲ, ಬುದ್ಧಿಯ ಗುಣ ಕೆಟ್ಟಾಗ ಪ್ರಸಾದಿಸ್ಥಲ, ಮನೋಗುಣ ಅಳಿದಾಗ ಪ್ರಾಣಲಿಂಗಸ್ಥಲ, ಜೀವನ ಗುಣ ಸಂದಾಗ ಶರಣ ಸ್ಥಲ, ಭಾವ ನಿರ್ಭಾವವಾದಾಗ ಐಕ್ಯಸ್ಥಲ. ಇಂತು ಷಟ್ಸ್ಥಲವಾಗಿ ವಾಙ್ಮನಕ್ಕೆ ಅಗೋಚರವಾದ ಬ್ರಹ್ಮವೆ ಆತ್ಮನು. ಆ ಆತ್ಮನಿಂದ ಆಕಾಶ ಹುಟ್ಟಿತ್ತು, ಆ ಆಕಾಶದಿಂದ ವಾಯು ಹುಟ್ಟಿತ್ತು. ಆ ವಾಯುವಿನಿಂದ ಅಗ್ನಿ ಹುಟ್ಟಿತ್ತು, ಆ ಅಗ್ನಿಯಿಂದ ಅಪ್ಪು ಹುಟ್ಟಿತ್ತು. ಆ ಅಪ್ಪುವಿನಿಂದ ಪೃಥ್ವಿ ಹುಟ್ಟಿತ್ತು. ಇಂತು-ಕುಳಸ್ಥಳವಾಗಿ, ಸ್ಥಳಕುಳವಾದ ವಿವರವೆಂತೆಂದಡೆ: ಪೃಥ್ವಿ ಅಪ್ಪುವಿನೊಳಡಗಿ, ಅಪ್ಪು ಅಗ್ನಿಯೊಳಡಗಿ, ಅಗ್ನಿ ವಾಯುವಿನೊಳಡಗಿ, ವಾಯು ಆಕಾಶದೊಳಡಗಿ, ಆಕಾಶ ಆತ್ಮನೊಳಡಗಿತ್ತು, ಆತ್ಮ ಪರಶಿವನಲ್ಲಿ ಅಡಗಿತ್ತು! ಅದೆತೆಂದಡೆ: ಪೂರ್ವದಲೇ ಭವೇತ್‌ ಭಕ್ತಿರಾಗ್ನೇಯಾಂ ಚ ಕ್ಷುದೈವ ಚ ದಕ್ಷಿಣೇ ಕ್ರೋಧಮುತ್ಪನ್ನಂ ನೈರುತ್ಯಾಂ ಸತ್ಯಮೇವ ಚ ಪಶ್ಚಿಮೇ ತು ಭವೇತ್‌ ನಿದ್ರಾ ವಾಯವ್ಯಾಂ ಗಮನಸ್ತಥಾ ಉತ್ತರಾಯಂ ಧರ್ಮಶೀಲಾವೈಶಾನ್ಯಾಂ ವಿಷಯಸ್ತಥಾ ಅಷ್ಟದಲೇಷು ಮಧ್ಯಸ್ಥಮಾನಚಂದಮಚಲಂ ಶಿವಃ” ಎಂದುದಾಗಿ ಇಂತು ಆತ್ಮನು ಪರಬ್ರಹ್ಮದೊಳಡಗಿ ನಿಂದಿತ್ತು ಗುಹೇಶ್ವರಾ.