Index   ವಚನ - 13    Search  
 
ಮಗನ ಮದುವೆಯ ತೊಡಗಿದಾಗ ಬಡಬಡನೆ ಹೋಗಿ ಹಾರುವನ ಕರೆವಿರಿ. ಅವನೇನು ನಿಮ್ಮ ಗುರುವೆ? ನಿಮ್ಮ ಮನೆದೇವರೆ? ನಿಮ್ಮ ಅಣ್ಣ ತಮ್ಮನೆ? ನಿಮ್ಮ ಕುಲಬಾಂಧವನೆ? ನಿಮ್ಮ ಹೊಂದಿ ಹೊರದವನೆ? ಶಿವ ಸಹೋದರನೆ? ನಿಮ್ಮ ಅಜ್ಜ ಮುತ್ತೈನೆ? ಛೀ ಛೀ ಎಲೊ ಶಿವದ್ರೋಹಿ ಕೇಳೊ. ಬಣ್ಣಗಾರ ಬಾಯಿಬಡಕ ಭ್ರಷ್ಟಮಾದಿಗ ವಿಪ್ರಜೋಯಿಸನ ಮಾತ ಕೇಳಿ ಮದುವೆಯಾದ ಪಂಚಪಾಂಡವರು ಕೆಟ್ಟರು. ಹರಿವಿರಂಚಿ ಹರಿಶ್ಚಂದ್ರ ದೇವೇಂದ್ರ ನಾಗಾರ್ಜುನ ಕಂಸರಾಜ ನಳಚಕ್ರವರ್ತಿ ಚಂದ್ರ ಸೂರ್ಯ ಮಂಗಳ ಬುಧ ಶುಕ್ರ ಸುರಸ್ತೋಮ ಮುನಿಸ್ತೋಮ ಕೆಟ್ಟಿತು. ಪಂಚಾಂಗ ಕೇಳಿದ ದಕ್ಷನ ಪಡೆಯೆಲ್ಲ ಕೆಟ್ಟು ನಷ್ಟವಾಗಿಹೋದ ದೃಷ್ಟವ ಕಂಡು ಕೇಳಿ, ಶಿವನ ಹಳಿವ ಹೊಲೆಮನದ ವಿಪ್ರಜೋಯಿಸನ ಕರೆಸಿ, ಕೈಮುಗಿದು ಕಾಣಿಕೆಯ ಕೊಟ್ಟು ಪಂಚಾಂಗವ ಕೇಳಿದ ಶಿವಭಕ್ತರಿಗೆ ತಾ ಗುರುದ್ರೋಹ, ಲಿಂಗದ್ರೋಹ, ಜಂಗಮದ್ರೋಹವು ಒದಗಿ, ತಾವು ಹಿಂದೆ ಮಾಡಿದ ದಾನಧರ್ಮ ಪರೋಪಕಾರವು ಕೆಟ್ಟು ನರಕಸಮುದ್ರದೊಳಗೆ ಮುಳುಗಾಡುತ್ತೇಳುತ್ತ ತಾವೇ ಸೇರಲರಿಯದೆ ಕೆಟ್ಟರು ನೋಡಾ ಹಲಕೆಲಬರು ನಿಸ್ಸಂಗ ನಿರಾಳ ನಿಜಲಿಂಗಪ್ರಭುವೆ.