ಆವಾವ ದೇಹ ತೊಟ್ಟರೂ ದೇಹಕ್ಕೆ ತಕ್ಕ ಸಂಸಾರ ಬಿಡದು.
ಆಧ್ಯಾತ್ಮಿಕ ಅಧಿದೈವಿಕ, ಅಧಿಭೌತಿಕವೆಂಬ, ತಾಪತ್ರಯಾಗ್ನಿಯಲ್ಲಿ
ಬೇಯದೆ ಮಾಬರೆ?
ಹಿಂದೆ ಮಾಡಿದ ಕರ್ಮ ಪೀಡಿಸದೆ ಬಿಡುವುದೆ?
ಸುಖಲೇಶವ ಕಾಣದೆ ಬಳಲುತ್ತಿದೆ ಜಗವೆಲ್ಲ.
ಇದನರಿದು ಮಲಕೋಶ ಶರೀರ ಸಂಸಾರವ
ಹೇಸಿ ಬಿಡು ಮರುಳೆ.
ಮುಂದೆ ನಿನಗೆ ನಿಜಪದವಹುದು,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲಿ ಸುಖಿಯಪ್ಪೆ ಮರುಳೆ.