Index   ವಚನ - 56    Search  
 
ಸಂಸಾರದ ಸುಖವೆತ್ತ ನಿಮ್ಮ ನಿಜ ಸುಖವೆತ್ತ? ಕತ್ತಲೆಯೆತ್ತ ಬೆಳಗೆತ್ತ? ಎನ್ನಂತರಂಗದೊಳಗಿರ್ದು ತೋರುವೆ ಅಡಗುವೆ ಇದೇನು ಗಾರುಡಿಗತನ ನಿನಗೆ?. ಸವಿವಾಲು ಸಕ್ಕರೆಯನುಣ ಕಲಸಿ, ಬೇವನುಣಿಸಿಹೆನೆಂದಡೆ ಅದು ಹಿತವಹುದೆ? ನಿನ್ನ ನಿಜಸುಖದ ಸವಿಗಲಿಸಿ, ಸಂಸಾರಸುಖವನುಣಿಸಿಹೆನೆಂದರದು ಮನಕೊಂಬುದೆ?. ಎನ್ನೊಡನೆ ವಿನೋದವೆ ನಿನಗೆ? ಬೇಡ ಬೇಡ. ಎನ್ನ ನೀನರಿದು ಸಲಹು, ನಿನಗೆ ಎನ್ನಾಣೆಯಯ್ಯಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ.