Index   ವಚನ - 60    Search  
 
ಸಂಸಾರಕ್ಕೆ ಹೇಸಿ, ಗುರುವನರಸಿಕೊಂಡು ಬಂದ ಶಿಷ್ಯನ ಕಣ್ಣ ಮುಂದೆ, ಪರಶಿವನು ಗುರುವಾಗಿ ಪ್ರತ್ಯಕ್ಷನಾದನಯ್ಯ. ಆ ಗುರುವೆ ಕಂಡು, ಸಾಷ್ಟಾಂಗವೆರಗಿ ಬಿನ್ನೈಸಲು, ಶ್ರೀಗುರು ಶಿಷ್ಯನಾದಿಯನರಿದು, ಈತ ನನ್ನವನೆಂದು ಕರುಣ ಹುಟ್ಟಿ, ಅಣವಾದಿ ಮಲತ್ರಯಂಗಳ ದೋಷವ ಕಳೆದು, ಶುದ್ಧಾತ್ಮನ ಮಾಡಿ, ವಿಭೂತಿಯ ಪಟ್ಟವ ಕಟ್ಟಿ, ಪಂಚಕಳಶೋದಕದಿಂದಭಿಷೇಕವ ಮಾಡಿ, ಪಂಚಾಕ್ಷರಿಯನುಪದೇಶಿಸಿ, ಅಂಗದ ಮೇಲೆ ಲಿಂಗವ ಧರಿಸಿದನಯ್ಯ. ಇಂತಾದ ಬಳಿಕ, ಕಾಯವೇ ಶಿವಕಾಯವಾಗಿ, ಪ್ರಾಣವೇ ಪರಶಿವನಾಯಿತ್ತು. ಇಂತು, ಶ್ರೀಗುರುವಿನುಪದೇಶದಿಂದ ಸದ್ಯೋನ್ಮುಕ್ತನಾದೆನಯ್ಯಾ, ನಿಜಗುರು ಸ್ವತಂತ್ರ ಸಿದ್ಧಲಿಂಗೇಶ್ವರ.