ಭೂಮಿ ಜಲ ಅಗ್ನಿ ಮರುತ ಆಕಾಶವೆಂಬವೆಲ್ಲ,
ಶ್ರೀವಿಭೂತಿಮಯವಾಗಿ ತೋರುತ್ತಿವೆ, ಶಿವ ಶಿವಾ.
ಮನ ಚಕ್ಷುರಾದಿ ಇಂದ್ರಿಯಂಗಳೆಲ್ಲವು
ಶ್ರೀ ವಿಭೂತಿಮಯವಾಗಿ ತೋರುತ್ತಿವೆ, ಶಿವ ಶಿವಾ.
ಚಂದ್ರ ಆದಿತ್ಯ ಸರ್ವದೇವತಾರೂಪವೆಲ್ಲ
ಶ್ರೀ ವಿಭೂತಿಮಯವಾಗಿ ತೋರುತ್ತಿವೆ, ಶಿವ ಶಿವಾ.
ಈ ಪರಿಯಿಂದ ತೋರಿ, ವ್ಯಾಪಕವಾಗಿ ಬೆಳಗುವ,
ಪರಂಜ್ಯೋತಿ ಸ್ವರೂಪ ವಿಭೂತಿಯೆಂದು,
ಒಲಿದು ಧರಿಸಿದವನೇ ಜೀವನ್ಮುಕ್ತನಯ್ಯಾ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ.