Index   ವಚನ - 98    Search  
 
ಭಕ್ತಂಗೆ ವ್ರತವಾರರಲ್ಲಿ ತದ್ಗತವಾಗಿಹುದೆ ಭಕ್ತಿ. ಅದೆಂತೆಂದಡೆ ಗುರುವೇ ಶಿವನೆಂದರಿದು, ಗುರುವಾಜ್ಞೆಯ ಪಾಲಿಸುವುದೇ ಗುರುವ್ರತ. ಗುರುಮುಖದಲ್ಲಿ ಬಂದ ಲಿಂಗದ ಪೂಜೆಯಲ್ಲಿ, ನಿಯತಾತ್ಮನಾಗಿ ಭಾವ ಸಮೇತವಾದುದು ಲಿಂಗವ್ರತ. ಜಂಗಮವೇ ಮಹಾಲಿಂಗವೆಂದರಿದು, ಪೂಜಾದಿ ಕ್ರಿಯೆಯಿಂದ ಧನವನರ್ಪಿಸುವುದೇ ಚರವ್ರತ. ಗುರು ಲಿಂಗ ಜಂಗಮದ ಪ್ರಸಾದ ಸೇವನಾನುಭವವೇ ಪ್ರಸಾದವ್ರತ. ಲೋಕಪಾವನವಾದ ಶ್ರೀಗುರುಪಾದಾಂಬು[ ಜ]ವ, ಸ್ನಾನಪಾನಾದಿಗಳಿಂದಾಚರಿಸುವುದೇ ಪಾದೋದಕವ್ರತ. ಗುರು ಲಿಂಗ ಜಂಗಮ ಪಾದೋದಕ ಪ್ರಸಾದದಲ್ಲಿ ತಲ್ಲೀನವಾದ ಭಕ್ತಿಯೇ ಭಾಕ್ತಿಕವ್ರತ. ಇಂತೀ ಷಡ್ವಿಧ ವ್ರತವನರಿದಾಚರಿಸುತ್ತಿರ್ಪಾತನೇ ಸದ್ಭಕ್ತನಯ್ಯಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ.