Index   ವಚನ - 104    Search  
 
ಆವ ವೇಷವ ಧರಿಸಿದಡೇನು? ದೇಹವೆಂಬ ಹುತ್ತಿನಲ್ಲಿ, ಹುಸಿ ಎಂಬ ಸರ್ಪ, ಸಜ್ಜನರನಟ್ಟಿ ಕಡಿದಡೆ, ವಿಷದ ಮೂರ್ಛೆಯಿಂದ ಬಳಲುತ್ತಿರ್ದರಯ್ಯ ಸಜ್ಜನರು. ಶಿವಜ್ಞಾನವೆಂಬ ನಿರ್ವಿಷವ ಕೊಂಡು, ಓಂನಮಃಶಿವಾಯ ಎಂಬ ಮಂತ್ರವ ಜಪಿಸಿ, ವಿಷವಂ ಪರಿಹರಿಸಿಕೊಂಡರಯ್ಯ. ಸರ್ಪ ಕಚ್ಚಿ ಏರಿ ಬಾಯಲ್ಲಿ ಹೋಯಿತೆಂಬಂತೆ, ನಿಂದಕರಿಗೆ ನಿಂದಿಸಿತೆ ಬಂದಿತ್ತಲ್ಲದೆ, ಅಲ್ಲಿ ತಮಗೊಂದಾಗಿಲ್ಲ. ಸಜ್ಜನರು ನೊಂದ ನೋವು ಸುಮ್ಮನೆ ಹೋಹುದೆ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ, ಅವರಲ್ಲಿ ನೀವಿಪ್ಪಿರಾಗಿ?.