Index   ವಚನ - 119    Search  
 
ಕ್ಷುತ್ತು ಪಿಪಾಸೆ ಶೋಕ ಮೋಹ ಜರೆ ಮರಣ ಈ ಷಡೂರ್ಮಿಗಳು, ಕೆಡುವುದಕೊಂದು ವಿವರವ ಹೇಳಿಹೆ ಕೇಳಿರಯ್ಯ. ಅಂಗದಾಪ್ಯಾಯನವಳಿದು, ಲಿಂಗದಾಪ್ಯಾಯನ ಉಳಿದಡೆ ಕ್ಷುತ್ತು ಕೆಟ್ಟುದು. ಪಾದೋದಕವೆಂಬ ಪರಮಾನಂದ ಜಲವ ನೀಂಟಿದಲ್ಲಿ ಪಿಪಾಸೆ ಕೆಟ್ಟುದು. ಲಿಂಗಪೂಜಾಪರದಲ್ಲಿ ಗದ್ಗದುಕೆಗಳು ಪುಟ್ಟಿ ಆನಂದಾಶ್ರುಗಳು ಸೂಸಿದಲ್ಲಿ ಶೋಕ ಕೆಟ್ಟುದು. ಲಿಂಗ ಮೋಹಿಯಾಗಿ, ದೇಹ ಮೋಹವ ಮರೆದಲ್ಲಿ, ಮೋಹ ಕೆಟ್ಟುದು. ಶಿವಲಿಂಗದಲ್ಲಿ ಕರಗಿ ಕೊರಗಿ, ಸರ್ವ ಕರಣೇಂದ್ರಿಯಂಗಳು ಲಿಂಗದಲ್ಲಿ ಲೀಯ್ಯವಾಗಿ, ಶಿಥಿಲತ್ವವನೆಯ್ದಿದಲ್ಲಿ, ಜರೆ ಕೆಟ್ಟುದು. ಮಹಾಲಿಂಗದಲ್ಲಿ ತಾನೆಂಬುದಳಿದು ಲಿಂಗೈಕ್ಯವಾದಲ್ಲಿ, ಮರಣ ಕೆಟ್ಟುದು. ಇಂತೀ ಷಡೂರ್ಮಿಗಳನು ಈ ಪರಿ ಲಿಂಗಾವಧಾನದಲ್ಲಿ ಕೆಡಿಹಸಿದಾತನೆ, ಭಕ್ತನು ಕಾಣಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ.