Index   ವಚನ - 164    Search  
 
ಗಿರಿ ತರು ಗುಹೆ ಮಹಾವಿಪಿನ ಸರೋವರದಲ್ಲಿ ಹಿರಿದುಗ್ರ ತಪವ ಮಾಡುತ್ತ ಪವನಾಹಾರ, ಪರ್ಣಾಹಾರ, ಜಲಾಹಾರ, ಫಳಾಹಾರ ನಿರಾಹಾರದಲ್ಲಿದ್ದಡೇನು? ತನು ಮನ ರೂಪವಾದ ಮಾಯೆ ಕಾಡದೆ ಬಿಡುವಳೆ? ತನುವಿನಲ್ಲಿ ವ್ಯಾಪಾರ ಮನದಲ್ಲಿ ವ್ಯಾಕುಲವಾಗಿ ಕಾಡದೆ ಬಿಡುವಳೆ? ಈ ಮಾಯೆಯ ಗೆಲುವುದಕ್ಕೊಂದುಪಾಯವ ಕಾಬುದು. ಅದೆಂತೆಂದಡೆ, ಕಂಗಳ ಕೊನೆಯಲ್ಲಿ ಲಿಂಗದ ನೋಟ. ಮನದ ಕೊನೆಯಲ್ಲಿ ಲಿಂಗದ ನೆನಹು. ಜಿಹ್ವೆಯ ಕೊನೆಯಲ್ಲಿ ಶಿವಮಂತ್ರ. ಭಾವದ ಕೊನೆಯಲ್ಲಿ ಶಿವಾನುಭಾವ ನೆಲೆಗೊಂಡಡೆ, ಅಂಗದ ಅವಯವಂಗಳೆಲ್ಲ ಲಿಂಗದ ಅವಯವಂಗಳಾಗಿ, ಕೀಟ ಭ್ರಮರನಂತೆ ತಾನೇ ಶಿವನಹನು. ಇಂತಪ್ಪ ಲಿಂಗಾನುಭಾವಿ ಲಿಂಗಸಂಗಿಗೆ ಅಂಗವಿಲ್ಲ. ಅಂಗವಿಲ್ಲದ ನಿತ್ಯ ನಿರ್ಮಲಂಗೆ, ಮಾಯಾಮಲಿನ ಮುನ್ನವೆ ಹೊದ್ದದಯ್ಯ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ.