ಶಿವಜ್ಞಾನೋದಯವಾದ ಭಕ್ತನ ಪೂರ್ವಾಶ್ರಯವಳಿದು
ಭಕ್ತನಾಗಬೇಕೆಂಬಿರಿ.
ಭವಿಗೆ ಪೂರ್ವಾಶ್ರಯವಲ್ಲದೆ ಭಕ್ತಂಗೆ ಪೂರ್ವಾಶ್ರಯವುಂಟೇ?
ಇಲ್ಲವಾಗಿ.
"ಅಜ್ಞಾನಂ ಪೂರ್ವಮಿತ್ಯಾಹುರ್ಭವೋSನಾದಿಸ್ಥಲಾಶ್ರಯಃ|
ಸರ್ವಂ ನಿರಸಿತವ್ಯಂ ಚ ಪ್ರಯತ್ನೇನ ವಿಪಶ್ವಿತಾ"
ಎಂದುದಾಗಿ,
ಮಲ ಮಾಯಾ ಸಂಸಾರದಲ್ಲಿ ಮರಳಿ ಮರಳಿ ಬಪ್ಪಾತನೆ ಭವಿ.
ಸಂಸಾರವಳಿದು, ನಿಜವುಳಿದು
ಗುರು ಲಿಂಗ ಜಂಗಮಕ್ಕೆ ಮಾಡುವ ಭಕ್ತಂಗೆ ಭವವಿಲ್ಲ.
ಆತನು ಜೀವನ್ಮುಕ್ತನಾಗಿಹನು ಕಾಣಾ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ.