ಅಯ್ಯಾ, ನಿಮಗೆ ಪತ್ರೆ ಪುಷ್ಪದಿಂದ ಪೂಜೆಯ ಮಾಡುತಿರ್ದಡೇನು
ಸರ್ವೇಂದ್ರಿಯಂಗಳು ಸೋಂಕಿದವೆಲ್ಲ
ನಿಮ್ಮ ಪೂಜೆಯಾಗಿ ಮಾಡದನ್ನಕ್ಕ?
ಅಯ್ಯಾ, ನಿಮ್ಮ ನೆನೆವುತ್ತಿರ್ದಡೇನು
ನೆನೆವ ಮನದಲ್ಲಿ ನಿಮ್ಮ ನೆಲೆಗೊಳಿಸಿ
ಮನ ನಿಮ್ಮಲ್ಲಿ ಲೀಯವಾಗದನ್ನಕ್ಕ?
ಅಯ್ಯಾ ನಿಮಗೆ ಸಕಲ ಸುಯಿಧಾನವನರ್ಪಿಸುತ್ತಿರ್ದಡೇನು
ಅರ್ಪಣದೊಳಗೆ ತನ್ನ ನಿಮ್ಮಲ್ಲಿ ಅರ್ಪಿಸಿ ನಿಮ್ಮೊಳಗಾಗದನ್ನಕ್ಕ?
ಅದು ಕಾರಣ,
ತನುಗುಣವಿಡಿದು ಲಿಂಗವ ಮುಟ್ಟಿ ಪೂಜೆಯ ಮಾಡಿದವರೆಲ್ಲ,
ನಿಮಗೆ ಮುನ್ನವೇ ದೂರವಾದರು.
ನಾನಿದನರಿದು ಅವಿರಳ ಲಿಂಗಾರ್ಚನೆಯ ಮಾಡಿ
ನಿಮ್ಮೊಳಗಾದೆನಯ್ಯಾ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ.