ರೂಪು ಕುರೂಪುಗಳನು,
ಲಿಂಗ ನೋಡಿದಡೆ ನೋಡುವನು,
ಲಿಂಗ ನೂಕಿದಡೆ ತಾ ನೂಕುವನು.
ಶಬ್ದಾಪಶಬ್ದಂಗಳನು ಲಿಂಗ ಕೇಳಿದಡೆ ಕೇಳುವನು,
ಲಿಂಗ ತಾ ನೂಕಿದಡೆ ನೂಕುವನು.
ಸುರಸ ಕುರಸಂಗಳನು ಲಿಂಗ ಸವಿದಡೆ ಸವಿವನು,
ಲಿಂಗ ನೂಕಿದಡೆ ತಾ ನೂಕುವನು.
ಗಂಧ ದುರ್ಗಂಧಗಳನು
ಲಿಂಗ ವಾಸಿಸಿದಡೆ ವಾಸಿಸುವ,
ಲಿಂಗ ನೂಕಿದಡೆ ತಾ ನೂಕುವನು.
ಮೃದು ಕಠಿಣ ಶೀತೋಷ್ಣಂಗಳನು
ಲಿಂಗ ಸೋಂಕಿದಡೆ ಸೋಂಕುವನು.
ಲಿಂಗ ನೂಕಿದಡೆ ತಾ ನೂಕುವನು.
ಲಿಂಗಮಧ್ಯಪ್ರಸಾದಿಯಾದ ಕಾರಣ
ಲಿಂಗದೊಡನೆ ಕೂಡಿ ಅರಿದು ಭೋಗಿಸಿ ಸುಖಿಸುವನು,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ ನಿಮ್ಮ ಪ್ರಸಾದಿ.