Index   ವಚನ - 271    Search  
 
ಪ್ರಾಣಾಪಾನಸಂಘಟದಿಂದ ಪ್ರಾಣನ ಗುಣವಳಿದು ಪ್ರಾಣಮಯಲಿಂಗವಾದ ಪ್ರಾಣಲಿಂಗಕ್ಕೆ ಸಮತೆಯೇ ಸ್ನಾನೋದಕ. ಪರಿಪೂರ್ಣಭಾವವೇ ವಸ್ತ್ರ ಶಕ್ತಿಗಳೇ ಯಜ್ಞಸೂತ್ರ. ವಿದ್ಯೆಯೇ ಸುಗಂಧ. ಭೂತದಯೆಯೇ ಅಕ್ಷತೆ. ಪಂಚ ವಿಷಯಂಗಳೇ ಪುಷ್ಪ. ಅಂತಕರಣಂಗಳೇ ಧೂಪ. ಪಂಚೇಂದ್ರಿಯಂಗಳೇ ದೀಪ. ಸುಖದುಃಖಶೂನ್ಯವಾದ ಆತ್ಮಕಳೆಯೇ ನೈವೇದ್ಯ. ಗುಣತ್ರಯಂಗಳೇ ತಾಂಬೂಲ. ಪ್ರಾಣಸಮರ್ಪಣವೇ ನಮಸ್ಕಾರವು. ಶಾಂತಿಯೇ ಪುಷ್ಪಾಂಜಲಿಯಾಗಿ, ಈ ಪರಿಯಿಂದ, ಪ್ರಾಣಲಿಂಗಪೂಜೆಯ ಮಾಡಬಲ್ಲಾತನೇ ಪ್ರಾಣಲಿಂಗಿ. ಆತನೇ ನಿಜಾನುಭಾವಿ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲಿ ಆತನೇ ನಿರ್ಮಳ ಜ್ಞಾನಿ.