Index   ವಚನ - 340    Search  
 
ಪ್ರಸಾದ ಪ್ರಸಾದವೆಂದೆಂಬರು, ಪ್ರಸಾದದಾದಿಕುಳವನಾರು ಬಲ್ಲರು? ಪ್ರಸಾದವೆಂಬುದು ಅತರ್ಕ್ಯ ಅಪ್ರಮಾಣವು. ಗುರುವಿನಲ್ಲಿ ಶುದ್ಧಪ್ರಸಾದವೆನಿಸಿತ್ತು. ಲಿಂಗದಲ್ಲಿ ಸಿದ್ಧಪ್ರಸಾದವೆನಿಸಿತ್ತು. ಜಂಗಮದಲ್ಲಿ ಪ್ರಸಿದ್ಧಪ್ರಸಾದವೆನಿಸಿತ್ತು. ಇಂತೀ ತ್ರಿವಿಧಮುಖವೊಂದೇ ಪ್ರಸಾದವಾಗಿ ತೋರಿ ಮತ್ತೆ ವಿಶ್ವದೊಳಗೆ ವಿಶ್ವತೋಮುಖವಾಗಿ ಪ್ರಕಾಶಿಸುತ್ತ, ಎನ್ನಂತರಂಗದಲ್ಲಿ ಬೆಳಗುವ ಮಹಾಪ್ರಸಾದವು ಎನ್ನ ಸರ್ವಾಂಗಮಯವಾಗಿ ತೋರುತ್ತಿದೆ. ಶಿವ! ಶಿವಾ!! ನಿಮ್ಮ ಪ್ರಸಾದದ ಮಹಿಮೆಯನೇನೆಂದುಪಮಿಸುವೆನು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.