Index   ವಚನ - 348    Search  
 
ಆರಾರದ ನಿಚ್ಚಣಿಗೆಯನೇರಿ ನೋಡಲು ಸೂಕ್ಷ್ಮ ಮಂದರಗಿರಿಯೆಂಬ ಮಹಾಪರ್ವತವ ಕಾಣಬಹುದು. ಆ ಪರ್ವತವ ತುಟ್ಟ ತುದಿಯನೇರಿ ನೋಡಲು ಮಹದಾಕಾಶ ಮಂಟಪವುಂಟು. ಆ ಮಂಟಪವ ಹೊಕ್ಕಿಹೆನೆಂದು ವಿಚಾರಿಸಿ ನೋಡಲು ಅಲ್ಲೊಂದು ಸೂಕ್ಷ್ಮದ್ವಾರವುಂಟು. ಆ ಸೂಕ್ಷ್ಮದ್ವಾರ ಕವಾಟವ ತೆರೆದು ನೋಡಲು ಅಲ್ಲಿ ನಿರುಪಾಧಿಕ ಜ್ಯೋತಿ ಬೆಳಗುತ್ತಿಪ್ಪುದು. ಆ ಬೆಳಗಿನೊಳಗೆ ಅಚಲವಾಗಿ ನಿಂದು, ಪರಿಪೂರ್ಣ ಪೂಜೆಯಾಗಿ ತನ್ನನೆ ನಿರಾಳಲಿಂಗಕ್ಕೆ ಪೂಜೆ ಮಾಡುವಾತನೆ ಪರಮ ನಿರ್ವಾಣಿಯಯ್ಯಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ.